ಉಡುಪಿ: ಯುವಕನೊಬ್ಬನ ಮೃತದೇಹ ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರು ಕಿರಿಮಂಜೇಶ್ವರ ಕಳ್ಳಂಗಡಿ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕ ಆತ್ಮಹತ್ಯೆಗೆ ಶರಣು: ಪೊಲೀಸರ ವಿರುದ್ಧ ಕುಟುಂಬಸ್ಥರ ಆಕ್ರೋಶ ರಾಮ ಪೂಜಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ. ಓಮ್ನಿ ಚಾಲಕನಾಗಿದ್ದ ಈತನ ಮೇಲೆ ಯುವತಿಯೊಬ್ಬಳು ತನಗೆ ಕಿರುಕುಳ ನೀಡುತ್ತಿದ್ದ ಎಂದು ದೂರು ನೀಡಿದ್ದಳು. ಆಕೆ ನೀಡಿದ ದೂರಿನ ಅನ್ವಯ ಗಂಗೊಳ್ಳಿ ಪೊಲೀಸರು ವಿಚಾರಣೆಗಾಗಿ ಕರೆದೊಯ್ದಿದ್ದರು. ಬಳಿಕ ಅಲ್ಲಿಂದ ಕುಂದಾಪುರ ಎಎಸ್ಪಿ ಕಚೇರಿಗೆ ಕರೆದೊಯ್ದು ತಡರಾತ್ರಿಯವರೆಗೂ ವಿಚಾರಣೆ ನಡೆದಿತ್ತು. 9 ಗಂಟೆಗೆ ರಾಮನ ಸೋದರನಿಗೆ ಕರೆ ಮಾಡಿದ ಪೊಲೀಸರು, ಬೈಂದೂರು ಪೊಲೀಸ್ ಠಾಣೆಗೆ ಬಂದು ಆತನನ್ನು ಕರೆದೊಯ್ಯಲು ತಿಳಿಸಿದ್ದರು ಎನ್ನಲಾಗಿದೆ.
ತಡರಾತ್ರಿ ಸುಮಾರು 11.30ಕ್ಕೆ ಮನೆಗೆ ಕರೆದುಕೊಂಡು ಬರಲಾಗಿತ್ತು. ಬೆಳಿಗ್ಗೆ ಮನೆಯಿಂದ ರಾಮ ಪೂಜಾರಿ ಕಾಣೆಯಾಗಿದ್ದಾನೆ. ಮುಂಜಾನೆ ಸುಮಾರು 7.30ರ ಬಳಿಕ ಕಿರಿಮಂಜೇಶ್ವರದ ರೈಲು ಹಳಿ ಬಳಿ ರಾಮ ಪೂಜಾರಿ ದೇಹ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸಮೀಪದಲ್ಲಿ ಆತನ ಬೈಕ್ ಕೂಡ ಪತ್ತೆಯಾಗಿದೆ.
ಬೈಂದೂರಿನಲ್ಲಿ ದಾಖಲಾದ ಪ್ರಕರಣಕ್ಕೆ ಗಂಗೊಳ್ಳಿ ಪೊಲೀಸರು ಮಫ್ತಿಯಲ್ಲಿ ಬಂದು ರಾಮ ಪೂಜಾರಿಯನ್ನು ಕರೆದೊಯ್ದಿದ್ದು, ಆತನ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ. ಅಲ್ಲದೆ ಚೈನ್, ಮೊಬೈಲ್ ಕಿತ್ತಿಟ್ಟುಕೊಳ್ಳಲಾಗಿದೆ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ. ಪೊಲೀಸರ ದೌರ್ಜನ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾನೂನು ಕೈಗೆತ್ತಿಕೊಂಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ರಾಮ ಪೂಜಾರಿ ವಿರುದ್ಧ ದೂರು ನೀಡಿದವರ ಪೂರ್ವಾಪರ ವಿಚಾರಣೆ ನಡೆಸಬೇಕು. ಆತ್ಮಹತ್ಯೆಯೇ ಆಗಿದ್ದರೆ ಅದಕ್ಕೆ ಪ್ರಚೋದನೆ ನೀಡಿದವರ ಮೇಲೆ ಕ್ರಮವಾಗಬೇಕು. ತಮಗೆ ಸೂಕ್ತ ನ್ಯಾಯ ಒದಗಿಸಬೇಕೆಂದು ಕುಟುಂಬಸ್ಥರು ಪಟ್ಟು ಹಿಡಿದ್ದಾರೆ.