ಕಾರ್ಕಳ(ಉಡುಪಿ): ಕ್ರಿಮಿನಲ್ ಹಿನ್ನೆಲೆಯುಳ್ಳ ವಿವಾಹಿತನೊಂದಿಗೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ಗ್ರಾಮವೊಂದರ ಈಕೆ ಕಳೆದ ಅ.21ರಂದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಐದೊಕ್ಲು ನಿವಾಸಿ ವಿವಾಹಿತ ವ್ಯಕ್ತಿ ರೋಷನ್ ಪೂಜಾರಿ ಎಂಬಾತನೊಂದಿಗೆ ನಾಪತ್ತೆಯಾಗಿದ್ದಾಳೆ.
ಘಟನೆಯ ಹಿನ್ನಲೆ:ಈಕೆ ಕಾರ್ಕಳದ ಕಾಲೇಜೊಂದರಲ್ಲಿ ಬಿಸಿಎ ವಿದ್ಯಾರ್ಥಿನಿಯಾಗಿದ್ದು, ಕಾರ್ಕಳದ ಬಸ್ ನಿಲ್ದಾಣದಲ್ಲಿ ಮೊಬೈಲ್ ಅಂಗಡಿಯನ್ನಿಟ್ಟುಕೊಂಡಿದ್ದ ರೋಷನ್ ಪೂಜಾರಿ ಎಂಬಾತನೊಂದಿಗೆ ಕಳೆದ 7 ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್ಗೆಂದು ಬಂದಾಗ ಪರಿಚಯವಾಗಿದೆ.
ಇದೇ ಪರಿಚಯ ಬಳಿಕ ಸ್ನೇಹಕ್ಕೆ ತಿರುಗಿ, ನಿರಂತರ ಸಂಪರ್ಕದಲ್ಲಿದ್ದ ಇವರಿಬ್ಬರು ಪ್ರೀತಿಸಲು ಶುರು ಮಾಡಿದ್ದಾರೆ. ಅ.21 ರಂದು ಇವರಿಬ್ಬರು ಉಡುಪಿಯಲ್ಲಿ ಝೂಮ್ ಕಾರನ್ನು ಬಾಡಿಗೆಗೆ ಪಡೆದು, ಗೋವಾಕ್ಕೆ ತೆರಳಿ ಅಲ್ಲಿ ಕಾರನ್ನು ಲಾಕ್ ಮಾಡಿ ನಾಪತ್ತೆಯಾಗಿದ್ದಾರೆ.
ಕ್ರಿಮಿನಲ್ ಹಿನ್ನೆಲೆ:ರೋಷನ್ ಪೂಜಾರಿ ಕ್ರಿಮಿನಲ್ ಹಿನ್ನೆಲೆಯುಳ್ಳವನಾಗಿದ್ದು, ಈತ ಈ ಹಿಂದೆ ಕಾರ್ಕಳದ ಕ್ಲಿನಿಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳನ್ನು ಪ್ರೀತಿಸಿ ಬಳಿಕ ಆಕೆಯನ್ನು ವಂಚಿಸಲು ಯತ್ನಿಸಿದ್ದ ಎಂಬ ಆರೋಪ ಸಹ ಇದೆ ಎನ್ನಲಾಗಿದೆ. ನಂತರ ದಲಿತ ಸಂಘಟನೆಯು ಈತನೊಂದಿಗೆ ಆಕೆಯನ್ನು ವಿವಾಹ ಮಾಡಿಸಿತ್ತು ಎನ್ನುವ ಮಾಹಿತಿ ಲಭ್ಯವಾಗಿದೆ
ಈ ಮೊದಲು ಮದುವೆಯಾದ ಯುವತಿಯನ್ನು ಪ್ರೀತಿಸುವ ಮೊದಲೇ ಮಿಯಾರಿನ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇದನ್ನು ಪ್ರಶ್ನಿಸಿದ ವಿವಾಹಿತ ಮಹಿಳೆಯ ವಾರಗಿತ್ತಿಯ ಸಾವಿನಲ್ಲಿ ಈತನ ಕೈವಾಡವಿದ್ದು, ಈ ಕುರಿತು ಕಳೆದ 2 ವರ್ಷದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಈತನ ಪತ್ನಿಯು ಕೂಡ ಇವನ ವರ್ತನೆಯಿಂದ ಬೇಸತ್ತು ತವರು ಮನೆ ಸೇರಿದ್ದಾಳೆ.