ಉಡುಪಿ:ಕೊರೊನಾ ಪ್ರಕರಣಗಳ ಆತಂಕದ ನಡುವೆಯೇ ಸೋಂಕಿನಿಂದ ಬಳಲುತ್ತಿದ್ದ 9 ಜನ ಪೊಲೀಸರು ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿಯಲ್ಲಿ 9 ಜನ ಪೊಲೀಸರಿಗೆ ಕೊರೊನಾ ವಕ್ಕರಿಸಿದ್ದರಿಂದ ಇಡೀ ಜಿಲ್ಲೆಯೇ ಆತಂಕಕ್ಕೆ ಒಳಗಾಗಿತ್ತು. ಇದೀಗ ಆ 9 ಜನ ಪೊಲೀಸರು ಗುಣಮುಖರಾಗಿದ್ದು, ಇಂದು ಸಂಜೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದರಿಂದ ತುಂಬಾ ಆತಂಕದಲ್ಲಿದ್ದ ಜಿಲ್ಲೆಯ ಜನರು ಕೊಂಚ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಇದೇ ವೇಳೆ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಹಾಗೂ ಕೊರೊನಾ ವಾರಿಯರ್ಸ್ಗೆ ಧನ್ಯವಾದ ತಿಳಿಸಿದ ಜಗದೀಶ್, ಪೊಲೀಸ್ ಸಿಬ್ಬಂದಿ ಸೇರಿದಂತೆ ಯಾರೂ ಕೂಡ ಕೊರೊನಾ ಬಂದ ಸಾರ್ವಜನಿಕರನ್ನು ಅಸ್ಪೃಶ್ಯರಂತೆ ನೋಡಬಾರದು ಎಂದು ಪೊಲೀಸರ ಹೋರಾಟದ ಹಾದಿಯನ್ನು ಶ್ಲಾಘಿಸಿದರು.
ಜಿಲ್ಲೆಯಲ್ಲಿ ನೂರಾರು ನಿರ್ಬಂಧಿತ ಪ್ರದೇಶಗಳನ್ನು ಮಾಡಲಾಗಿದೆ. ಆಯಾ ವಲಯಗಳಿಗೆ ಅಗತ್ಯ ವಸ್ತುಗಳ ಪೂರೈಕೆಯನ್ನು ಸ್ಥಳೀಯ ಜಿಲ್ಲಾಡಳಿತ ಮಾಡಲಿದೆ. ಹೊರಗಡೆಯಿಂದ ಬಂದವರು 28 ದಿನ ಕ್ವಾರಂಟೈನ್ ಆಗಲೇಬೇಕು. ಯಾವುದೇ ಕ್ಷಣದಲ್ಲಿಯಾದರೂ ಕೊರೊನಾ ಲಕ್ಷಣ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸೆಲ್ಫ್ ರಿಪೋರ್ಟಿಂಗ್ ಅವಧಿಯನ್ನು ನಿಷ್ಠೆಯಿಂದ ಪಾಲಿಸಬೇಕು ಎಂದರು.