ಉಡುಪಿ:ಜಿಲ್ಲೆಯಲ್ಲಿ ಇಂದು 204 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 768ಕ್ಕೇರಿಕೆಯಾಗಿದೆ.
ಇಂದಿನ ವರದಿಗಾಗಿ 2,000ಕ್ಕಿಂತ ಹೆಚ್ಚು ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವುಗಳಲ್ಲಿ 204 ಪಾಸಿಟಿವ್ ಎಂದು ದೃಢಪಟ್ಟಿವೆ. ಇದರಲ್ಲಿ 203 ಜನರಿಗೆ ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ ಇದೆ. 157 ಜನ ಪುರುಷರು, 40 ಮಹಿಳೆಯರು ಮತ್ತು 7 ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.
ಚೆಕ್ ಪೋಸ್ಟ್ನಲ್ಲಿ ಕಾರ್ಯನಿರ್ವಹಿಸಿದ್ದ ಓರ್ವ ಸ್ಥಳೀಯ ಪೊಲೀಸ್ ಸಿಬ್ಬಂದಿಗೂ ಕೊರೊನಾ ತಗುಲಿದೆ. ಇಲಾಖಾ ಸಿಬ್ಬಂದಿಯ ಚೆಕಪ್ ವೇಳೆ ಇವರಲ್ಲಿ ಸೋಂಕು ಪತ್ತೆಯಾಗಿದೆ. ಸೋಂಕಿತರನ್ನು ನಿಗದಿತ ಕೋವಿಡ್ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ.
ಹೊರ ರಾಜ್ಯಗಳಿಂದ ಬಂದಿರುವ ಎಂಟೂವರೆ ಸಾವಿರ ಜನರ ಪರೀಕ್ಷೆ ಬಹುತೇಕ ಮುಗಿದಿದೆ. ಇಂದು ಸಂಜೆಯೊಳಗೆ ಎಲ್ಲಾ ಟೆಸ್ಟ್ ಮುಗಿಯುತ್ತದೆ. ಆ ಬಳಿಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಲಿದೆ. ನಂತರ ನಾವು ತೀವ್ರ ಉಸಿರಾಟದ ತೊಂದರೆ ಮತ್ತು ಕೊರೊನಾ ಲಕ್ಷಣ ಕಂಡು ಬಂದವರ ಪರೀಕ್ಷೆ ನಡೆಸಲಿದ್ದೇವೆ ಎಂದು ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.