ಉಡುಪಿ:ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ, ಉಡುಪಿಯಲ್ಲಿ ಕುಡಿದವರ ಸಾವಿನ ಸರಣಿ ಆರಂಭವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಓರ್ವ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅತಿಯಾದ ಮದ್ಯ ಸೇವಿಸಿ ಇಬ್ಬರು ಸತ್ತಿದ್ದಾರೆ.
ಇನ್ನು ನಾಲ್ಕನೇ ವ್ಯಕ್ತಿ ಹೊಟ್ಟೆ ನೋವಿನಿಂದ ಮೃತನಾಗಿದ್ದಾನೆ. ಲಾಕ್ಡೌನ್ ಘೋಷಣೆಯಾದಾಗ ಜಿಲ್ಲೆಯಲ್ಲೂ ಮದ್ಯ ಮಾರಾಟ ಸ್ಥಗಿತಗೊಂಡಿತ್ತು. ಈ ವೇಳೆ, ಜಿಲ್ಲೆಯಲ್ಲಿ ಒಂದೇ ವಾರದ ಅವಧಿಯಲ್ಲಿ 8 ಮಂದಿ ಸಾವನ್ನಪ್ಪಿದ್ದರು. ಮದ್ಯ ಸಿಗದೇ ಇರುವುದು ಇವರ ಸಾವಿಗೆ ಕಾರಣವಾಗಿತ್ತು. ಇದೀಗ ಮದ್ಯ ಮಾರಾಟ ಆರಂಭವಾಗುತ್ತಿದ್ದಂತೆ ಮತ್ತೊಮ್ಮೆ ಸಾವಿನ ಸರಣಿ ಶುರುವಾಗಿದೆ. ಉಡುಪಿ ನಗರದಲ್ಲಿ ಅತಿಯಾದ ಮದ್ಯ ಸೇವನೆಯಿಂದ ಅಪರಿಚಿತ ಯುವಕ ಸತ್ತಿದ್ದಾನೆ. ಸ್ವರ್ಣಾ ಆರ್ಕೆಡ್ ಬಳಿಯ ಪಾದಚಾರಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಈತ ಕೊನೆಯುಸಿರೆಳೆದಿದ್ದಾನೆ.