ಉಡುಪಿ: ಕಮಲಾಕ್ಷಿ ಸೊಸೈಟಿಯಿಂದ 100 ಕೋಟಿಗೂ ಅಧಿಕ ವಂಚನೆ ಆರೋಪ ಉಡುಪಿ : ನಗರದ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ವಿರುದ್ಧ ಗ್ರಾಹಕರಿಗೆ 100 ಕೋಟಿಗೂ ಅಧಿಕ ರೂ. ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನಲೆ ಬ್ಯಾಂಕಿನ ಗ್ರಾಹಕರು, ಸಂತ್ರಸ್ತರು ಇಂದು ಸಹಕಾರಿ ಬ್ಯಾಂಕ್ ಕಚೇರಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ ಸಹಕಾರ ಬ್ಯಾಂಕ್ ಮುಖ್ಯಸ್ಥ ಬಿ.ವಿ ಲಕ್ಷ್ಮೀನಾರಾಯಣ ನಾಪತ್ತೆಯಾಗಿದ್ದಾರೆ.
ಕಮಲಾಕ್ಷಿ ವಿವಿಧೋದ್ಧೇಶ ಸಹಕಾರ ಸಂಘವು ವಿವಿಧ ಸೊಸೈಟಿ ಮತ್ತು ಗ್ರಾಹಕರಿಂದ ಸುಮಾರು 100 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ ವಂಚನೆ ಮಾಡಿರುವುದಾಗಿ ಹೇಳಲಾಗಿದೆ. ಅಲ್ಲದೆ ಈ ಠೇವಣಿ ಹಣವನ್ನು ಹಲವೆಡೆ ಹೂಡಿಕೆ ಮಾಡಿ ಸಂಸ್ಥೆ ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ.
ಈ ಸಹಕಾರಿ ಸಂಘವು ಶೇ.12ರಷ್ಟು ಬಡ್ಡಿ ನೀಡುವುದಾಗಿ ಗ್ರಾಹಕರಿಂದ ಹಣ ಸಂಗ್ರಹಿಸಿತ್ತು. ಮೊದಲ ಒಂದು ವರ್ಷ ತಮ್ಮ ಗ್ರಾಹಕರಿಗೆ ಬಡ್ಡಿಯನ್ನು ನೀಡಿದ್ದು, ಬಳಿಕ ಜೂನ್ ತಿಂಗಳಿಂದ ಯಾವುದೇ ಬಡ್ಡಿ ನೀಡಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ವಿಚಾರಿಸಿರುವ ಗ್ರಾಹಕರಿಗೆ ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಇಲ್ಲಿ ಠೇವಣಿ ಇಟ್ಟಿರುವ ಗ್ರಾಹಕರು ಕಂಗಲಾಗಿದ್ದಾರೆ.
ಇನ್ನು ಗ್ರಾಹಕರು ಸಂಸ್ಥೆಯ ಮಹಿಳಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಮಹಿಳಾ ಸಿಬ್ಬಂದಿ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆ ಸಂಬಂಧ ಉಡುಪಿ ನಗರಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ :ಉಡುಪಿ ನಗರಸಭೆ ಮಾಜಿ ಅಧ್ಯಕ್ಷೆ ಪತಿ ಮೇಲೆ ರಾಡ್ನಿಂದ ಹಲ್ಲೆ