ತುಮಕೂರು:ಚುನಾವಣೆ ವೇಳೆ ಕಾಂಗ್ರೆಸ್ ಭರವಸೆ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ ಇದಕ್ಕಾಗಿ ಪೂರಕವಾದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದರು. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 5 ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಅನುಷ್ಠಾನಕ್ಕೆ ತರಲು ಬದ್ಧವಾಗಿದೆ ಎಂದರು.
ಸಿದ್ದಗಂಗಾ ಮಠಕ್ಕೆ ನಾನು ಹೊಸದಾಗಿ ಬರ್ತಿಲ್ಲ. ನಾನು 2006ರಲ್ಲಿ ಮಂತ್ರಿಯಾಗಿದ್ದೆ ಅವಾಗ ಶಿವಕುಮಾರ ಸ್ವಾಮೀಜಿಗಳು ಇದ್ದರು, ಇಲ್ಲಿಗೆ ಬಂದು ಅವರ ಆಶೀರ್ವಾದ ಪಡೆದುಕೊಂಡು ಹೋಗಿದ್ದೆ. 2018ರಲ್ಲೂ ಸಚಿವನಾಗೋಕೆ ದೇವರು ಅವಕಾಶ ಮಾಡಿಕೊಟ್ಟಿತ್ತು. ಆಗಲೂ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಹೋಗಿದ್ದೆ. ಇವತ್ತು ಮಂತ್ರಿಯಾಗಿದ್ದೇನೆ, ಇವತ್ತು ಬಂದು ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾನು ಯಾವಾಗ, ಯಾವಾಗ ಮಂತ್ರಿಯಾಗಿದ್ದೇನೆ ಅವಾಗ ಇಲ್ಲಿಗೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ ಎಂದರು.
ಶ್ರೀಸಿದ್ದಲಿಂಗ ಶ್ರೀಗಳ ಬಳಿ ಇಲ್ಲಿನ ವ್ಯವಸ್ಥೆ ಬಗ್ಗೆ ಮಾತನಾಡಿದ್ದೇನೆ. ಕಳೆದ ವರ್ಷ 10 ಸಾವಿರ ಮಕ್ಕಳು ಇದ್ದರಂತೆ. ಈ ವರ್ಷ ಅಡ್ಮೀಶನ್ ಜಾಸ್ತಿ ಬರ್ತಿದೆಯಂತೆ. ಅದಕ್ಕೆಲ್ಲಾ ಅರೆಂಜ್ಮೆಂಟ್ ಮಾಡಬೇಕಾಗುತ್ತದೆ. ಈಗ ಸದ್ಯಕ್ಕೆ ಇಲ್ಲಿ 10 ಸಾವಿರ ಮಕ್ಕಳನ್ನ ಇಟ್ಟುಕೊಂಡಿದ್ದಾರೆ. ನಾನು ಕೂಡಾ ಅವರ ಬಳಿ ರಿಕ್ವೆಸ್ಟ್ ಮಾಡಿದ್ದೇನೆ. ಬರುವ ವರ್ಷ ಇಲ್ಲಿ ಹೆಚ್ಚಿನ ಕಟ್ಟಡ ಕಟ್ಟಿ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ಕೊಡಿ ಎಂದು ಹೇಳಿದ್ದೇನೆ. ಇಲ್ಲಿ ಲಕ್ಷಾಂತರ ಜನ ಬಂದು ಊಟ ಮಾಡ್ತಾರೆ. ಯಾರಿಗೂ ಇಲ್ಲಿ ಊಟ ಇಲ್ಲ ಅಂತ ಸಮಸ್ಯೆಯಾಗಿಲ್ಲ. ಸಿದ್ದಗಂಗಾ ಮಠಕ್ಕೆ ಬಿಡುಗಡೆಯಾಗಿದ್ದ ಅನುದಾನವನ್ನ ಸರ್ಕಾರ ತಡೆಹಿಡಿದ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನಾನು ಮುಖ್ಯಮಂತ್ರಿಗಳಿಗೆ ವಿಚಾರ ತಿಳಿಸುತ್ತೇನೆ. ನಾವು ಎಜುಕೇಶನ್ಗೆ ಹೆಚ್ಚಿನ ಒತ್ತು ಕೊಡ್ಬೇಕು. ಅನುದಾನ ತಡೆಹಿಡಿದ ಬಗ್ಗೆ ಸ್ವಾಮೀಜಿಗಳ ಬಳಿ ಚರ್ಚೆ ಮಾಡಿಲ್ಲ ಎಂದು ಹೇಳಿದರು.