ತುಮಕೂರು: ಕಾಂಗ್ರೆಸ್ ಸುಳ್ಳು ಗ್ಯಾರಂಟಿ ಕೊಟ್ಟು, ಜನರಿಗೆ ಟೋಪಿ ಹಾಕಿ, ದ್ರೋಹ ಮಾಡಿ ಅಧಿಕಾರಕ್ಕೆ ಬಂದಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಘೋಷಣೆ ಮಾಡಿ ಈಗ ಹಲವು ಷರತ್ತು ಹಾಕಿ ಮೋಸ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ. ಶುಕ್ರವಾರ ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದ್ರೋಹ ಮಾಡಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆ. ಸರ್ಕಾರದ ಮೋಸದ ವಿರುದ್ಧ ಸದನದ ಹೊರಗೆ ಒಳಗೆ ನಾವು ಹೋರಾಟ ಮಾಡುತ್ತೇವೆ ಎಂದರು.
ಅಧಿವೇಶನ ಆರಂಭದಿಂದ ಮುಗಿಯುವವರೆಗೂ ಧರಣಿ ಮಾಡುತ್ತೇವೆ. ರಾಜ್ಯದ ಎಲ್ಲಾ ಕಡೆಯಿಂದ ಬಂದು ಪ್ರತಿಭಟನೆ ಮಾಡಲಿದ್ದೇವೆ. ಸರ್ಕಾರದ ಕೊಟ್ಟ ಯೋಜನೆ ಜಾರಿ ಮಾಡಬೇಕು ಇಲ್ಲ ಎಂದರೆ ಅಧಿಕಾರದಲ್ಲಿ ಒಂದು ನಿಮಿಷನೂ ಅವರು ಇರಬಾರದು. ಅಧಿವೇಶನಕ್ಕೆ ಮುಂಚೆ ವಿಪಕ್ಷನಾಯಕರ ಆಯ್ಕೆ ಮಾಡುತ್ತೇವೆ. ನನಗೆ 81 ವರ್ಷ ಆದರೂ ನಾನು ಹೋರಾಟ ಮಾಡುತ್ತೇನೆ ಎಂಬ ಖಡಾಖಂಡಿತ ಮಾತನ್ನಾಡಿದ್ದಾರೆ.
ಪ್ರಧಾನಿ ಮೋದಿಗೆ ವಿಶ್ವದಲ್ಲಿ ಗೌರವ ಸಿಗುತ್ತಿದೆ. ಈ ಬಾರಿ ಕಳೆದ ಬಾರಿಯಂತೆ ಲೋಕಸಭೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಪಡೆಯುತ್ತೇವೆ. ಇನ್ನು ಯಡಿಯೂರಪ್ಪ ಅವರ ಸ್ಥಾನ ಮಾನದ ಕುರಿತು ಉಳಿದ ಪಕ್ಷಗಳು ಬಿಜೆಪಿ ವಿರುದ್ಧ ಹಲವಾರು ಟೀಕೆಗಳನ್ನು ಮಾಡಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಯಡಿಯೂರಪ್ಪ, ನನ್ನನ್ನು ಯಾರೂ ನಿರ್ಲಕ್ಷ್ಯ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ ಸತ್ಯಾಂಶ ಏನೂ ಇಲ್ಲ, ನನಗೆ ಎಲ್ಲಾ ಸ್ಥಾನ ಮಾನ ಗೌರವ ಸಿಕ್ಕಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರೂ ಬೇಕಾದರೂ ಆಕಾಂಕ್ಷಿ ಆಗಬಹುದು, ಸೋಮಣ್ಣ ಆಕಾಂಕ್ಷಿ ಆಗೋದರಲ್ಲಿ ತಪ್ಪೇನಿಲ್ಲ ಎಂದರು.
ಕೇಂದ್ರದಿಂದ ಅಕ್ಕಿ ವಿಳಂಬ ವಿಚಾರ: ಕೆಲ ಭರವಸೆ ಕೊಟ್ಟು ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದಿದ್ದಾರೆ. 15 ಕೆಜಿ ಅಕ್ಕಿಯಲ್ಲಿ 1 ಕೆಜಿಯೂ ಕಡಿಮೆ ಆಗಬಾರದು. ಕಡಿಮೆ ಮಾಡಿದರೆ ನಾವು ಹೋರಾಟ ಮಾಡುತ್ತೇವೆ, ಇನ್ನು ಈ ಸರ್ಕಾರ ಎಷ್ಟು ದಿನ ಇರುತ್ತದೆ ಗೊತ್ತಿಲ್ಲ ಎನ್ನುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಟಕ್ಕರ್ ನೀಡಿದ್ದಾರೆ.