ತುಮಕೂರಿನಲ್ಲಿ ಬಿಜೆಪಿ ಮುಖಂಡರಿಂದ ಬಿಎಸ್‌ವೈ ಹುಟ್ಟುಹಬ್ಬ ಆಚರಣೆ ತುಮಕೂರು :ಇಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ 80ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಕಮಲ ಪಾಳಯದಲ್ಲಿ ಸಡಗರ ಮನೆ ಮಾಡಿದ್ದು, ಪಕ್ಷದ ಕೇಂದ್ರ ಮತ್ತು ರಾಜ್ಯ ನಾಯಕರು ಯಡಿಯೂರಪ್ಪಗೆ ಶುಭಾಶಯ ತಿಳಿಸುತ್ತಿದ್ದಾರೆ. ತುಮಕೂರು ನಗರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿತರಾದ ಇಬ್ಬರು ಮುಖಂಡರು ಹುಟ್ಟುಹಬ್ಬವನ್ನು ಪ್ರತ್ಯೇಕವಾಗಿ ಆಚರಿಸಿ ಅಭಿಮಾನ ತೋರಿದ್ದಾರೆ.
ಒಂದೆಡೆ ತುಮಕೂರು ಜಿಲ್ಲಾ ಬಿಜೆಪಿ ಘಟಕ ಹಾಗೂ ಬಿ.ಎಸ್.ವೈ ಅಭಿಮಾನಿ ಬಳಗದಿಂದ ಹುಟ್ಟು ಹಬ್ಬ ಆಚರಣೆ ಮಾಡಿದರೆ, ಇನ್ನೊಂದೆಡೆ ಬಿಜೆಪಿ ಟಿಕೆಟ್ ಆಕಾಂಕ್ಷಿತ ಮಾಜಿ ಸಚಿವ ಸೊಗಡು ಶಿವಣ್ಣ ನೇತೃತ್ವದಲ್ಲಿ ಬಿಜೆಪಿ ಕಚೇರಿಯ ಅನತಿ ದೂರದಲ್ಲಿಯೇ ಪ್ರತ್ಯೇಕ ಆಚರಣೆ ಮಾಡಿದರು. ಸೊಗಡು ಶಿವಣ್ಣ ಅವರು ಮತ್ತು ಬೆಂಬಲಿಗರು ತುಮಕೂರಿನ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಕೇಕ್ ಕತ್ತರಿಸಿ ವಿಜೃಂಭಣೆಯಿಂದ ಆಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳ್ಳಾವಿ ಖಾರ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, "ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಸಾರ್ವಜನಿಕವಾಗಿ ಸಾರ್ವಭೌಮತ್ವವನ್ನು ಪಡೆದು ರಾಜ್ಯದಲ್ಲಿ ಅತ್ಯಂತ ಶ್ರೇಷ್ಠ ಸರ್ಕಾರ ನಡೆಸಿದ್ದಾರೆ" ಎಂದು ಹೊಗಳಿದರು. ಇದೇ ವೇಳೆ ಅವರು, ಬಿಜೆಪಿಯ ಪ್ರಗತಿ ರಥ ಎಲ್.ಇ.ಡಿ. ವಾಹನಗಳಿಗೆ ಚಾಲನೆ ನೀಡಿದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನಡೆಯಿತು. ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶಾಸಕ ಜ್ಯೋತಿ ಗಣೇಶ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ರವಿಶಂಕರ್, ಮಾಜಿ ಎಂ.ಎಲ್.ಸಿ. ಹುಲಿನಾಯ್ಕರ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗಿಯಾಗಿದ್ದರು.
ಸೊಗಡು ಶಿವಣ್ಣ ಬಣದಿಂದ ಹುಟ್ಟುಹಬ್ಬ:ಇನ್ನೊಂದೆಡೆ, ಸೊಗಡು ಶಿವಣ್ಣ ಬಣ ಬಿಎಸ್‌ವೈ ಹುಟ್ಟುಹಬ್ಬವನ್ನು ತುಮಕೂರು ವಿವಿ ಎದುರು ಕೇಕ್ ಕತ್ತರಿಸಿ ಆಚರಿಸಿದರು. ಸೊಡಗು ಶಿವಣ್ಣ ಅವರ ಮಗ ಕುಮಾರಸ್ವಾಮಿ, ಬೆಂಬಲಿಗರು ಅಭಿಮಾನಿಗಳಿಗೆ ಊಟೋಪಚಾರ ಮಾಡಿದರು.
ಇದನ್ನೂ ಓದಿ :ವಿಮಾನ ನಿಲ್ದಾಣ ಇಡೀ ಮಲೆನಾಡಿನ ಕನಸು ನನಸಾಗುವ ಸಂಕೇತ: ಬಿ.ಎಸ್.ಯಡಿಯೂರಪ್ಪ