ತುಮಕೂರು:2022ಕ್ಕೆ ವಿದಾಯ ಹೇಳುವ ಸಮಯ ಬಂದಿದೆ. 2022ರ ವರ್ಷವಿಡೀ ಜಿಲ್ಲೆಯನ್ನು ಅನೇಕ ಘಟನೆಗಳು ಕಾಡಿವೆ. ಅದರಲ್ಲೂ ಕೋವಿಡ್ ಕರ್ಫ್ಯೂ, ಅತಿವೃಷ್ಟಿ, ಅಪಘಾತಗಳ ಸರಮಾಲೆ ನಡೆದಿದೆ. ಇದರಿಂದ ಜನಸಾಮಾನ್ಯರು ಕಂಗೆಟ್ಟು ಹೋಗಿದ್ದರು. ಜಿಲ್ಲೆಯ ಬಹುತೇಕ ಬೆಟ್ಟ ಗುಡ್ಡಗಳಿಂದ ಕೂಡಿರುವಂಥ ಪ್ರದೇಶಗಳಲ್ಲಿ ಮಾನವ-ಪ್ರಾಣಿಗಳ ಸಂಘರ್ಷ ಕೂಡ ಹೆಚ್ಚಾಗಿತ್ತು.
ಕೋವಿಡ್ ಕರಿನೆರಳಿನಲ್ಲಿ ಕಳೆ ವರ್ಷವನ್ನು ಸ್ವಾಗತಿಸಲಾಗಿತ್ತು. ವಾರಾಂತ್ಯದ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಎರಡೂ ಅಲೆಗಳಿಗಳಲ್ಲಿ ಕೊಂಚ ಬೇಗನೇ ಕೋವಿಡ್ ಪ್ರಕರಣಗಳು ಇಳಿಮುಖ ಕಂಡವು.
ಜಿಲ್ಲೆಯಲ್ಲಿ ವರುಣಾರ್ಭಟ: ಹಿಂದೆಂದೂ ಕಂಡು ಕೇಳರಿಯದಂತಹ ಮಳೆಗೆ ಜಿಲ್ಲೆಯ ಜನತೆ ತತ್ತರಿಸಿದ್ದರು. ಕೆರೆ, ಕಟ್ಟೆಗಳು ತುಂಬಿ ಹರಿದವು. ಬತ್ತಿದ್ದ ಕೊಳವೆ ಬಾವಿಗಳಲ್ಲಿ ನೀರು ಉಕ್ಕಿತು. ಹಲವರು ಮನೆ ಕಳೆದುಕೊಂಡು ಬೀದಿಗೆ ಬಂದರು. ಪಾವಗಡ, ಮಧುಗಿರಿ, ಗುಬ್ಬಿ, ಶಿರಾ, ತುರುವೇಕೆರೆ, ತಾಲೂಕು ಸೇರಿದಂತೆ ಜಿಲ್ಲೆಯ ಸಾಕಷ್ಟು ಕಡೆಗಳಲ್ಲಿ ಮಳೆ ನೀರಿನ ರಭಸದಿಂದ ಹಲವರು ಪ್ರಾಣ ಕಳೆದುಕೊಂಡರು.
ಅಪಘಾತಗಳ ಸರಮಾಲೆ: ಈ ವರ್ಷ ಜಿಲ್ಲೆಯಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಾಗಿತ್ತು. ಪಾವಗಡ ತಾಲೂಕಿನ ಪಳವಲ್ಲಿ ಕಟ್ಟೆಯ ಬಳಿ ಖಾಸಗಿ ಬಸ್ ಪಲ್ಟಿಯಾಗಿ 7 ಮಂದಿ ಮೃತಪಟ್ಟಿದ್ದರು. ವಿದ್ಯಾರ್ಥಿಗಳೂ ಗಾಯಗೊಂಡಿದ್ದರು. ಶಿರಾ ಬಳಿಯ ಬಾಲೇನಹಳ್ಳಿ ಗೇಟ್ ಹತ್ತಿರ ಕ್ರೂಸರ್ ವಾಹನ ಪಲ್ಟಿಯಾಗಿ 9 ಮಂದಿ ಸಾವನ್ನಪ್ಪಿದ್ದರು.
ತುರುವೇಕೆರೆಯಲ್ಲಿ ನಾಲ್ಕು ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಯುವಕರು ಸ್ಥಳದಲ್ಲೇ ಅಸುನೀಗಿದ್ದರು. ತಿಪಟೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದರು. ಶಿರಾ, ಗುಬ್ಬಿ ವ್ಯಾಪ್ತಿಯಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತದಲ್ಲಿ ಏಳು ಜನ ಮೃತಪಟ್ಟಿದ್ದರೆ, ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ 31 ಮಂದಿ ಜಿಲ್ಲೆಯ ವಿವಿಧೆಡೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮನ ಕಲುಕಿದ ತಾಯಿ, ಹಸುಗೂಸು ಸಾವು:ರಾಜ್ಯಾದ್ಯಂತ ಸದ್ದು ಮಾಡಿದ್ದ ಜಿಲ್ಲಾ ಆಸ್ಪತ್ರೆಯಲ್ಲಿನ ಚಿಕಿತ್ಸೆಯ ಅವ್ಯವಸ್ಥೆಯಿಂದ ತಾಯಿ ಹಾಗೂ ಇಬ್ಬರು ಹಸುಗೂಸುಗಳ ಸಾವು ಜಿಲ್ಲೆಗೆ ಬಹುದೊಡ್ಡ ಕಪ್ಪು ಚುಕ್ಕೆ ಆಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ತಾಯಿ, ಶಿಶುಗಳು ಮರಣ ಹೊಂದಿದ ಘಟನೆ ಇಡೀ ರಾಜ್ಯದಲ್ಲಿ ಸಂಚಲ ಸೃಷ್ಟಿಸಿತ್ತು. ಗರ್ಭಿಣಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದರು. ಈ ಘಟನೆ ಮಾಸುವ ಮುನ್ನವೇ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗದೆ ಐದು ವರ್ಷದ ಬಾಲಕ ಅಬ್ಬಾಸ್ ಮೃತಪಟ್ಟಿದ್ದ.