ತುಮಕೂರು:ಅರಣ್ಯ ಇಲಾಖೆ ಪಾವಗಡ ಹಾಗೂ ವಿಶ್ವ ಗ್ರಾಮೋದಯ ಸಂಸ್ಥೆ ಪಾವಗಡ ಇವರ ಸಹಯೋಗದಲ್ಲಿ ವಿಶ್ವ ಓಝೋನ್ ದಿನಾಚರಣೆ ನಿಮಿತ್ತ ಪಾವಗಡ ತಾಲೂಕಿನ ಶ್ಯಾಮರಾಯನಪಾಳ್ಯ ಗ್ರಾಮದಲ್ಲಿ ಸಾವಿರಾರು ಗಿಡಗಳನ್ನು ಉಚಿತವಾಗಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ಗ್ರಾಮದ ಜನರನ್ನು ಉದ್ದೇಶಿಸಿ ಮಾತನಾಡಿದ ವಲಯ ಅರಣ್ಯ ವೀಕ್ಷಕರಾದ ಜಿ. ಗಂಗಾಧರ್ ಅವರು ಮಾತನಾಡಿ, ಮನುಷ್ಯ ತನ್ನ ಸ್ವಾರ್ಥ ಸಾಧನೆಗಾಗಿ ಡೀಸೆಲ್, ಪೆಟ್ರೋಲ್ನ ಅತಿ ಹೆಚ್ಚು ಬಳಕೆಯಿಂದ ಮತ್ತು ಲಕ್ಷಾಂತರ ಕಾರ್ಖಾನೆಗಳಿಂದ ಹೊರ ಹಾಕಲ್ಪಟ್ಟ ಅನಿಲಗಳಿಂದ ನಮಗೆ ರಕ್ಷಾ ಕವಚವಾಗಿರುವ ಓಜೋನ್ ಪದರವು ದಿನೇ ದಿನೆ ಶಿಥಿಲವಾಗಿ ಅತೀ ನೇರಳೆ ಕಿರಣಗಳು ಭೂಮಿಗೆ ನೇರವಾಗಿ ಬೀಳುತ್ತಿವೆ. ಇದರಿಂದ ಜಗತ್ತಿನಾದ್ಯಂತ ಜನರು ಇಂದು ಅನೇಕ ಕಾಯಿಲೆಗಳ ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ತುಂಬಾ ಆತಂಕ ಮತ್ತು ಅಪಾಯಕಾರಿ ಬೆಳವಣಿಗೆ ಎಂದರು.
ಉಚಿತ ಗಿಡಗಳನ್ನು ವಿತರಿಸಿರುವುದು ವಿಶ್ವ ಗ್ರಾಮೋದಯ ಸಂಸ್ಥೆಯ ಸ್ವಯಂ ಸೇವಕರಾದ, ಗ್ರಾಮದ ಬೀರಲಿಂಗಪ್ಪ ಮಾತನಾಡಿ, ಮನುಷ್ಯ ಅತಿ ಹೆಚ್ಚು ಗಿಡ ಮರಗಳನ್ನು ಕಡಿದು ಹಾಕುತ್ತಿರುವುದಲ್ಲದೇ ಫಲವತ್ತಾದ ಭೂಮಿಗೆ ಅನೇಕ ವಿಷ ರಾಸಾಯನಿಕಗಳನ್ನು ಎಗ್ಗಿಲ್ಲದೇ ಹಾಕಿ ಬೆಳೆಗಳನ್ನು ಬೆಳೆಯುತ್ತಿರುವುದೂ ಸಹ ಮನುಕುಲದ ಜೊತೆಗೆ ಅನೇಕ ಜೀವ ಸಂಕುಲದ ನಾಶಕ್ಕೆ ಕಾರಣವಾಗುತ್ತಿರುವುದು ಅತ್ಯಂತ ದುಃಖಕರ ಹಾಗೂ ದುರಂತದ ಸಂಗತಿಯಾಗಿದೆ ಎಂದರು.
ಇನ್ನು ಗ್ರಾಮದ ರೈತರಿಗೆ, ಮಹಿಳೆಯರಿಗೆ ಹಾಗೂ ನಿಡಗಲ್ಲು ಗ್ರಾಮಾಂತರ ಪ್ರೌಢಶಾಲೆಗೆ ಹೊಂಗೆ, ಬೇವು, ಹುಣಸೆ, ತೇಗ, ಮುಂತಾದ ವಿವಿಧ ಜಾತಿಯ 4,000 ಗಿಡಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಊರಿನ ಗ್ರಾಮಸ್ಥರು ಸೇರಿದಂತೆ, ಅಕ್ಕ ಪಕ್ಕದ ಹಳ್ಳಿಯ ನೂರಾರು ರೈತರು ಭಾಗವಹಿಸಿ ತಮ್ಮ ಮನೆಯ ಅಂಗಳದಲ್ಲಿ ಹಾಗೂ ಜಮೀನಿನಲ್ಲಿ ನೆಡಲು ಗಿಡಗಳನ್ನು ಪಡೆದುಕೊಂಡರು.