ತುಮಕೂರು: ತಾಲೂಕಿನ ಜಕ್ಕೇನಹಳ್ಳಿ ಬಳಿಯ ಎಂ.ಗೊಲ್ಲಹಳ್ಳಿ ಗ್ರಾಮದ ಬೆಟ್ಟದ ಮೇಲಿನ ಆಂಜನೇಯ ದೇವಾಲಯದಲ್ಲಿ ಅಪರಿಚಿತ ಮಹಿಳೆ ಶವ ದೊರೆತ ಪ್ರಕರಣ ನಡೆದು ಒಂದು ತಿಂಗಳಾದ್ರೂ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ. ನಿಧಿಗಾಗಿ ಮಹಿಳೆಯೊಬ್ಬರನ್ನು ಹತ್ಯೆ ಮಾಡಲಾಗಿತ್ತು ಎಂಬ ಸುದ್ದಿ ಎಲ್ಲೆಡೆ ಹರಡಿದೆ.
ಆದ್ರೆ ಈ ಪ್ರಕರಣ ನಡೆದು ತಿಂಗಳಾದ್ರೂ ದುಷ್ಕರ್ಮಿಗಳ ಸುಳಿವು ಪೊಲೀಸರಿಗೆ ದೊರೆಯುತ್ತಿಲ್ಲ. ಪ್ರಕರಣದ ತನಿಖೆಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್, ಘಟನೆ ನಡೆದ ಸ್ಥಳದಲ್ಲಿಯೇ ಒಂದು ರಾತ್ರಿ ತಂಗಿದ್ದಾರೆ. ಅಲ್ಲದೆ ಸ್ಥಳೀಯರೊಂದಿಗೆ ಸಾರ್ವಜನಿಕವಾಗಿ ಮಾತುಕತೆ ನಡೆಸಿ ಪ್ರಕರಣದ ಹಿನ್ನಲೆಯನ್ನು ತಿಳಿಯಲು ಮುಂದಾಗಿದ್ದಾರೆ.
ಸ್ಥಳೀಯರಿಗೆ ಎಸ್ಪಿಯ ಈ ರೀತಿಯ ಕಾರ್ಯವೈಖರಿ ಅಚ್ಚರಿ ಮೂಡಿಸಿದೆ. ಒಂದು ರಾತ್ರಿ ಘಟನೆ ನಡೆದ ಬೆಟ್ಟ ಮೇಲೆಯೇ ಎಸ್ಪಿ ತಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ತಂಗಿರುವ ಮಾಹಿತಿ ಅರಿತ ಸ್ಥಳೀಯರು, ಊಟ, ಉಪಹಾರದ ವ್ಯವಸ್ಥೆ ಮಾಡಿದ್ದಾರೆ. ಈ ವೇಳೆ ಘಟನೆಯ ಕುರಿತಾದ ಕೆಲವು ಮಾಹಿತಿಯನ್ನು ಪೊಲೀಸರ ತಂಡಕ್ಕೆ ನೀಡಿದ್ದಾರೆ.
ಮೇಲ್ನೋಟಕ್ಕೆ ಇದು ನಿಧಿಗಾಗಿ ನಡೆದ ಕೃತ್ಯ ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಇಂಥ ಘಟನೆಗಳು ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡೋದು ಹಿರಿಯ ಅಧಿಕಾರಿಗಳ ದಿನಚರಿ. ಆದ್ರೆ ಈ ಘಟನೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿ ಘಟನಾ ಸ್ಥಳದಲ್ಲೇ ತಂಗಿ ಸಾರ್ವಜನಿಕರೊಂದಿಗೆ ಬೆರೆತಿದ್ದಾರೆ. ಈ ಮೂಲಕ ಸಾರ್ವಜನಿಕರು ಮತ್ತು ಪೊಲೀಸರೊಂದಿಗೆ ಬಾಂಧವ್ಯ ಹೆಚ್ಚಾಗಿದೆ ಅಂತಾರೆ ಸ್ಥಳೀಯ ನಿವಾಸಿಗಳು. ಈ ರೀತಿಯ ಪ್ರಯತ್ನವು ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಮರುಕಳಿಸಲು ಅವಕಾಶ ನೀಡುವುದಿಲ್ಲ. ಅಂತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್.