ತುಮಕೂರು: ಜಿಲ್ಲೆಯಲ್ಲಿ ಈ ಬಾರಿ 90 ಸಾವಿರ ಟನ್ ಮಾವು ಇಳುವರಿ ಬರುವ ಅಂದಾಜು ಹೊಂದಲಾಗಿದೆ. ಆದ್ರೆ ಕೋವಿಡ್, ಲಾಕ್ಡೌನ್ ನಡುವೆ ಇದನ್ನು ಗ್ರಾಹಕರ ಬಳಿ ತಲುಪಿಸುವುದೇ ದೊಡ್ಡ ಸವಾಲಾಗಿದೆ.
ಹೌದು, ಜಿಲ್ಲೆಯಲ್ಲಿ ಈ ಬಾರಿ ಮಾವು ಇಳುವರಿ ಉತ್ತಮವಾಗಿದ್ದು, ಕಟಾವು ಆರಂಭವಾಗಿದೆ. ಈಗಾಗಲೇ ರೈತರು ಮಾವಿನ ಹಣ್ಣುಗಳನ್ನು ವರ್ತಕರಿಗೆ ಹಾಗೂ ಮಂಡಿಗಳಿಗೆ ತಲುಪಿಸುತ್ತಿದ್ದಾರೆ. ಆದರೆ, ವರ್ತಕರು ಚಿಲ್ಲರೆ ಮಾರಾಟಗಾರರಿಗೆ ಹಾಗೂ ಜನರಿಗೆ ತಲುಪಿಸಲು ಹೆಣಗಾಡುತ್ತಿದ್ದಾರೆ.
ಮಾವಿಗೆ ಉತ್ತಮ ಮಾರುಕಟ್ಟೆ ಸಿಗಲಿದೆಯೇ? ಈ ಬಾರಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಇಳುವರಿ ಕೊಂಚ ಕಡಿಮೆ ಎನ್ನಬಹುದು. ಕಳೆದ ವರ್ಷ ಒಂದು ಲಕ್ಷ ಟನ್ ಮಾವು ಇಳುವರಿ ಬಂದಿದ್ದು, ಈ ವರ್ಷ 10,000 ಟನ್ ಕಡಿಮೆ ಇಳುವರಿ ಲಭಿಸಿದೆ.
ಇನ್ನು ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡುವಿಕೆ ಹೆಚ್ಚಾಗಿದ್ದು, ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮಾತ್ರ ಮಾರುಕಟ್ಟೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸಂದರ್ಭದಲ್ಲಿ ಜನರು ಬಹುತೇಕ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗುತ್ತಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಲಭಿಸುವ ಹಣ್ಣನ್ನು ಸಾಧ್ಯವಾದರೆ ಮಾತ್ರ ಖರೀದಿಸುತ್ತಾರೆ. ಹೀಗಾಗಿ ಈ ಬಾರಿ ಮಾವಿನ ಹಣ್ಣು ಗ್ರಾಹಕರಿಗೆ ತಲುಪುವುದು ಕೂಡಾ ವಿಳಂಬವಾಗಲಿದೆ.
ಇದನ್ನೂ ಓದಿ:ನಗರ ಪೊಲೀಸ್ ಆಯುಕ್ತರ ಸಿಟಿ ರೌಂಡ್ಸ್ ಹಿನ್ನೆಲೆ ಲಾಠಿ ರುಚಿ ತೋರಿಸಿದ ಖಾಕಿ : ಅನಗತ್ಯ ಓಡಾಟಕ್ಕೆ ಬ್ರೇಕ್
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಅವರ ಪ್ರಕಾರ, ಮಾವಿನಹಣ್ಣು ಕಟಾವಿಗೆ ಹಾಗೂ ಸಾಗಾಣಿಕೆಗೆ ಯಾವುದೇ ರೀತಿಯ ತೊಂದರೆ ಎದುರಾಗಿಲ್ಲ. ಸಹಾಯವಾಣಿಯನ್ನು ತೆರೆದು ರೈತರಿಗೆ ನೆರವು ನೀಡಲಾಗುತ್ತದೆ. ಮಾವು ಬೆಳೆಯುವ ಪ್ರದೇಶಗಳಲ್ಲಿ ನಿರಂತರವಾಗಿ ಭೇಟಿ ನೀಡಿ ವರ್ತಕರು ಮತ್ತು ರೈತರ ನಡುವೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ. ಮಾರಾಟಕ್ಕೆ ಪೂರಕ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆದ್ರೆ ಕೋವಿಡ್ ಭೀತಿ ಮತ್ತು ಲಾಕ್ಡೌನ್ ಕಾರಣದಿಂದ ಉತ್ತಮ ಮಾರುಕಟ್ಟೆ ಸಿಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ರೈತರಿದ್ದಾರೆ.