ತುಮಕೂರು: ರಾಜ್ಯಾದ್ಯಂತ ಗಣಿಗಾರಿಕೆಗೆ ಬಳಸುತ್ತಿರೋ ಸ್ಫೋಟಕಗಳ ಅವೈಜ್ಞಾನಿಕ ಸಂಗ್ರಹ ಮತ್ತು ಸಾಗಣಿಕೆ ಕುರಿತು ಚರ್ಚೆ ನಡೆಯುತ್ತಿದೆ. ಇನ್ನೊಂದೆಡೆ ಜಿಲ್ಲೆಯಲ್ಲಿ ನಡೆದ ಜಿಲೆಟಿನ್ ಕಡ್ಡಿಗಳ ಸ್ಫೋಟ ಪ್ರಕರಣ ಗಣಿಗಾರಿಕೆ ಸುತ್ತಮುತ್ತಲ ಪ್ರದೇಶದ ಜನರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ.
ರಾಜ್ಯದಲ್ಲಿ ಇದುವರೆಗೆ ಗಣಿಗಾರಿಕೆಗೆ ಬಳಸಲ್ಪಡುವ ಸ್ಫೋಟಕಗಳ ಸುರಕ್ಷತೆ ದೃಷ್ಟಿಯಿಂದ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. ಅದ್ರಲ್ಲೂ ಸಂಗ್ರಹ ಮಾಡುವ ನಿಯಮಾವಳಿಗಳನ್ನು ಪಾಲಿಸುವಂತೆ ಕಟ್ಟುನಿಟ್ಟಾಗಿ ಬಳಕೆದಾರರಿಗೆ ಸೂಚಿಸಿತ್ತು. ಆದ್ರೆ ಶಿವಮೊಗ್ಗದಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ನಡೆದ ದುರಂತದಿಂದ ಎಚ್ಚೆತ್ತುಕೊಂಡಿರೋ ಸರ್ಕಾರ, ಸಾಗಣೆ ಮಾಡುವ ವೇಳೆಯೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತರಲು ಗಂಭೀರವಾಗಿ ಚಿಂತನೆ ನಡೆಸಿದೆ.
ಇದನ್ನೂ ಓದಿ:ತುಮಕೂರಿನಲ್ಲಿ ಜಿಲೆಟಿನ್ ಸ್ಫೋಟಗೊಂಡು ಮನೆ ಗೋಡೆ ಕುಸಿತ, ಮಹಿಳೆಗೆ ಗಾಯ
ಈ ಕುರಿತಂತೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಸಹ ತುಮಕೂರಿನಲ್ಲಿ ಜನವರಿ 26 ರಂದು ಪತ್ರಕರ್ತರಿಗೆ ವಿಷಯ ತಿಳಿಸಿದ್ದರು. ಸಚಿವರು ಈ ಹೇಳಿಕೆ ನೀಡಿ 8 ದಿನಗಳು ಸಹ ಕಳೆದಿಲ್ಲ. ಮಸ್ಕಲ್ ಗ್ರಾಮದಲ್ಲಿ ಸಂಗ್ರಹಿಸಿಡಲಾಗಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಗ್ರಾಮದ ಲಕ್ಷ್ಮೀಕಾಂತ ಎಂಬುವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ಜಿಲೆಟಿನ್ ಕಡ್ಡಿ ಸ್ಫೋಟದಿಂದ ಮನೆ ಸಂಪೂರ್ಣ ಧ್ವಂಸಗೊಂಡಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಲಕ್ಷ್ಮೀಕಾಂತ ಅವರ ಪತ್ನಿ ಸುವರ್ಣಮ್ಮಗೆ ಸ್ವಲ್ಪ ಪ್ರಮಾಣದ ಗಾಯವಾಗಿದೆ.
ಸಚಿವ ಮಾಧುಸ್ವಾಮಿ ಅವರ ಹೇಳಿಕೆಯಂತೆ ಸ್ಫೋಟಕಗಳನ್ನು ಸಂಗ್ರಹಿಸಿಡುವ ಸ್ಥಳದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗಿದ್ದರೂ, ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿರೋದು ನೋಡಿದ್ರೆ, ಗಣಿಗಾರಿಕೆ ನಡೆಸುವರು ಸರ್ಕಾರದ ನಿಯಮಾವಳಿಗಳ ಬಗ್ಗೆ ಕ್ಯಾರೇ ಎನ್ನುತ್ತಿಲ್ಲ.
ಇದನ್ನೂ ಓದಿ:ಶಿವಮೊಗ್ಗ: ಕಲ್ಲು ಕ್ವಾರಿಯಲ್ಲಿ ಭೀಕರ ಸ್ಫೋಟ... 5 ಸಾವು, ಸಿಎಂ ಸ್ಪಷ್ಟನೆ
ಇನ್ನು ಮುಂದಾದ್ರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಫೋಟಕಗಳನ್ನು ಸಂಗ್ರಹಿಸಿರುವ ಸ್ಥಳಗಳನ್ನು ಪತ್ತೆ ಹಚ್ಚಿ ಮುಂಜಾಗ್ರತೆ ವಹಿಸಬೇಕಿದೆ. ಅಲ್ಲದೆ ಪದೇ ಪದೇ ಬೆಳಕಿಗೆ ಬರುತ್ತಿರೋ ಅನಾಹುತಗಳಿಗೆ ಕಡಿವಾಣ ಹಾಕಬೇಕಿದೆ.