ಶಿವಮೊಗ್ಗ : ನಟ ಸುದೀಪ್ ಬಿಜೆಪಿ ಪರ ಪ್ರಚಾರ ಮಾಡಲು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದೆಡೆ ಪ್ರಚಾರಕ್ಕೆ ಹೋಗುವುದಾಗಿ ಹೇಳಿದ್ದಕ್ಕೆ ಕಾಂಗ್ರೆಸ್‌ನವರು ವಿರೋಧಿಸುವುದೇಕೆ ಎಂದು ಮೊದಲು ತಿಳಿಸಬೇಕು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಆಮ್ ಆದ್ಮಿ ಪಕ್ಷದ ಏಳುಮಲೈ ಹಾಗೂ ಜೆಡಿಎಸ್‌ನ ಗೌರಿ ಶ್ರೀನಾಥ್ ತಮ್ಮ ಬೆಂಬಲಿಗರೂಂದಿಗೆ ಬಿಜೆಪಿ ಸೇರಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ಸುದೀಪ್ ಇದೇ ಬೆಂಬಲವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದರೆ ಹೀಗೆ ವಿರೋಧ ಮಾಡುತ್ತಿದ್ದರೇ?. ಕಾಂಗ್ರೆಸ್‌ನವರು ಎಲ್ಲದಕ್ಕೂ ಟೀಕೆ ಮಾಡ್ತಾರೆ ಎಂದು ಹೇಳಿದರು. ರಾಜ್ಯದ ಮುಖ್ಯಮಂತ್ರಿಗಳ ಅಭಿವೃದ್ದಿ ಕೆಲಸ, ರಾಷ್ಟ್ರ ನಾಯಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯ ಹಾಗು ಬಿಜೆಪಿ ಸಿದ್ದಾಂತ ಮೆಚ್ಚಿ ಸುದೀಪ್ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮುಂದಾಗಿದ್ದಾರೆ ಎಂದರು.
ರಾಜ್ಯದ 224 ಕ್ಷೇತ್ರದಲ್ಲೂ ಬಿಜೆಪಿಯ ಪ್ರಮುಖ ಕಾರ್ಯಕರ್ತರು ತಮ್ಮ ನಾಯಕನನ್ನು ಆಯ್ಕೆ ಮಾಡಲು ಆಂತರಿಕ ಚುನಾವಣೆ ನಡೆದಿದೆ. ಅದರಲ್ಲಿ ನಮ್ಮ ಕಾರ್ಯಕರ್ತರು ಸಹ ನನ್ನ ಹೆಸರನ್ನು ಕಳುಹಿಸಿದ್ದಾರೆ. ಚುನಾವಣೆಯಲ್ಲಿ ಯಾರೆ ಸ್ಪರ್ಧೆ ಮಾಡಲಿ, ಚುನಾವಣೆ ಫ್ರೆಂಡ್ಲಿ ಫೈಟ್ ಆಗಬೇಕು. ಏಕೆಂದರೆ ಚುನಾವಣೆ ಕೇವಲ ಒಂದೂವರೆ ತಿಂಗಳಷ್ಟೇ, ಬಳಿಕ ಎಲ್ಲ ಪಕ್ಷದವರೂ ಸಮಾಜ ಸೇವೆ ಮಾಡಬೇಕಿದೆ ಎಂದರು.
ಸಿದ್ದರಾಮಯ್ಯ ಅಲೆಮಾರಿ ರಾಜಕಾರಣಿ:ಸಿದ್ದರಾಮಯ್ಯನ ಬಗ್ಗೆ ನಾನೇನು ಉತ್ತರ ಕೊಡಲಿ?. ಈ ಹಿಂದೆ ಕ್ಷೇತ್ರ ಹುಡುಕಾಟದ ಸಂದರ್ಭದಲ್ಲಿ ಅಲೆಮಾರಿಯಾಗಿದ್ದರು. ಅವರು ಮೊದಲು ಹೈಕಮಾಂಡ್ ತೀರ್ಮಾನ ಮಾಡಲಿ ಎಂದರೂ, ನಂತರ ಹೆಂಡ್ತಿ ಮಗನನ್ನು ಕೇಳುತ್ತೇನೆ ಎಂದರು. ಸಿದ್ದರಾಮಯ್ಯ ದಲಿತರು, ಒಕ್ಕಲಿಗರು, ಒಬಿಸಿಯವರಿಗೆ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದರು.