ತುಮಕೂರು:ಜಿಲ್ಲೆಯಲ್ಲಿ ನಡೆಯಬೇಕಿದ್ದ ಅನೇಕ ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ಇದರಿಂದ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿದ್ದರು.
ಇದಕ್ಕೆ ಕಾರಣ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗೂ ಸದಸ್ಯರು ಹಾಜರಾಗುತ್ತಿರಲಿಲ್ಲ. ಕೋರಂ ಕೊರತೆಯಿಂದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 600 ಕೋಟಿ ರೂ ಕಾಮಗಾರಿಗಳಿಗೆ ಸಭೆಯಿಂದ ಅನುಮೋದನೆ ಪಡೆಯಲು ಸಾಧ್ಯವಾಗಿರಲಿಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲದಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿರುವ ಲತಾರನ್ನು ಪದಚ್ಯುತಗೊಳಿಸಲು ಜಿಲ್ಲಾ ಪಂಚಾಯಿತಿಯ ಬಹುತೇಕ ಎಲ್ಲಾ ಸದಸ್ಯರು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದರು. ಕಳೆದ 10 ತಿಂಗಳಿನಿಂದ ಈ ವರ್ಷದ ಅನುದಾನದಲ್ಲಿ ಒಂದೇ ಒಂದು ಕಾಮಗಾರಿ ಸಹ ನಡೆದಿಲ್ಲ. ಅಲ್ಲದೇ ಜಿಲ್ಲೆಗೆ ಬಿಡುಗಡೆಯಾಗಿರುವ ಸುಮಾರು 600 ಕೋಟಿ ರೂ ಅನುದಾನವನ್ನು ಬಳಕೆ ಮಾಡಿಕೊಳ್ಳುವುದು ಹೇಗೆ ಎಂಬುದು ಸಚಿವ ಮಾಧುಸ್ವಾಮಿಗೆ ಯಕ್ಷಪ್ರಶ್ನೆಯಾಗಿತ್ತು.
ಓದಿ:ಕೆಡಿಪಿ ಸಭೆಯಲ್ಲಿ ಅಧಿಕಾರಿಗೆ ಕೆಟ್ಟ ಪದಗಳಲ್ಲಿ ತರಾಟೆ: ಸಚಿವ ಮಾಧುಸ್ವಾಮಿ ಸ್ಪಷ್ಟನೆ ಹೀಗಿದೆ..
ಇದರ ನಡುವೆ ಕೊರೊನಾ ಸೋಂಕು ಹರಡುವಿಕೆ ಭೀತಿ, ಆದರೆ ಸಚಿವ ಮಾಧುಸ್ವಾಮಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ನಿಟ್ಟಿನಲ್ಲಿ ಎರಡು ತಿಂಗಳಿನಿಂದ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದ್ದರು. ಎಲ್ಲ ಸದಸ್ಯರ ಮನವೊಲಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ನವೆಂಬರ್ 20ರಂದು ವಿಶೇಷ ಸಭೆಗೆ ಆಗಮಿಸುವಂತೆ ಕೋರಿದ್ದರು. ಅದರಂತೆ ಸಭೆಗೆ ಆಗಮಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರು ಕ್ರಿಯಾಯೋಜನೆ ರೂಪಿಸಲು ಒಪ್ಪಿಗೆ ನೀಡಿದ್ದರು. ಇದರಿಂದಾಗಿ ಸರ್ಕಾರಕ್ಕೆ ಅನುದಾನ ಬಳಕೆಯಾಗದ ಹಣ ವಾಪಸ್ ಹೋಗುವುದು ತಪ್ಪಿತ್ತು. ಅಲ್ಲದೇ ತಕ್ಷಣ ಕಾಮಗಾರಿಗಳನ್ನು ಆರಂಭಿಸುವಂತೆ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹಾಗೂ ಮಾಧುಸ್ವಾಮಿ ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಆದರೆ, ಜಿಲ್ಲಾ ಪಂಚಾಯಿತಿ ಸದಸ್ಯರು ಅಧಿಕಾರಿಗಳ ನಿರ್ಲಕ್ಷ್ಯದಿಂದ ಈಗಾಗಲೇ ಕಳೆದ ವರ್ಷ ಬಳಕೆಯಾಗದೆ 43 ಕೋಟಿ ಅನುದಾನ ಸರ್ಕಾರಕ್ಕೆ ವಾಪಸ್ ಹೋಗಿದೆ. ಈ ಬಾರಿ ಉಳಿದಿರುವ ಒಂದೂವರೆ ತಿಂಗಳ ಅವಧಿಯಲ್ಲಿ 600 ಕೋಟಿ ರೂ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಬೇಕಿದೆ. ಸಚಿವರ ಖಡಕ್ ಆದೇಶಕ್ಕೆ ಅಧಿಕಾರಿಗಳು ಯಾವ ರೀತಿಯಾಗಿ ಕೆಲಸ ಮಾಡಲಿದ್ದಾರೆ ಎಂಬುದನ್ನು ನಿರೀಕ್ಷಿಸಬೇಕಿದೆ.