ತುಮಕೂರು : ಬಿಜೆಪಿ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಬೆಂಬಲ ಕೊಡುತ್ತೇವೆ ಎಂದು ನಾವು ಹೇಳಿಲ್ಲ. ನಾವು ಸಪೋರ್ಟ್ ಕೊಡ್ತಿವಿ ಅಂತಾ ಅರ್ಜಿ ಹಾಕಿಕೊಂಡು ಹೋಗಿದ್ವಾ? ನಾವು ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡ್ತಿವಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ 123 ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಆ ನಿಟ್ಟಿನಲ್ಲಿ ಶ್ರಮ ಹಾಕಿದ್ದೇವೆ. ಬಿಜೆಪಿ ಅವರಿಗೆ ಸಂಪೂರ್ಣ ಬಹುಮತ ಬರುತ್ತೆ ಅನ್ನೋ ಭರವಸೆ ಇಲ್ಲ. ಹಾಗಾಗಿ ಜೋಷಿ ಸಪೋರ್ಟ್ ಬಗ್ಗೆ ಮಾತನಾಡಿದ್ದಾರೆ ಎಂದರು. ಎಂಎಲ್ಸಿ ಬೋಜೆಗೌಡ ಕಾಂಗ್ರೆಸ್ಗೆ ಬೆಂಬಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ವೈಯಕ್ತಿಕವಾಗಿ ಚಿಕ್ಕಮಗಳೂರು ರಾಜಕಾರಣದಲ್ಲಿ ಸೆಕ್ಯೂಲರ್ ವೋಟ್ಗಳು ಡಿವೈಡ್ ಆಗಿತ್ತು. ಈಗ ಸೆಕ್ಯೂಲರ್ ಓಟ್ಗಳು ಒಂದಾಗಲಿ ಎಂಬ ಅರ್ಥದಲ್ಲಿ ಹೇಳಿದ್ದಾರೆ. ಅವರಿಗೆ ನೋಟಿಸ್ ಕೊಡಲಿಕ್ಕೆ ಹೇಳಲಾಗಿದೆ ಎಂದು ಹೇಳಿದರು.
ನಾವು ಎಚ್ಚರದಿಂದ ಇರಬೇಕು:ತುಮಕೂರು ನಗರ ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಅಶ್ಲೀಲ ವಿಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ಈ ರೀತಿ ಪಿತೂರಿ ಮಾಡಿದವರು ಏನ್ ಸಾಚಾಗಳಾ? ಅದು ಷಡ್ಯಂತ್ರ. ಬಿಜೆಪಿ ಪಕ್ಷದವರು ಕೋರ್ಟ್ನಲ್ಲಿ ಸ್ಟೇ ತಗೊಂಡ್ರು. ಆದ್ರೆ ನಾವು ಸ್ಟೇ ತಗೊಂಡಿಲ್ಲ. ಇತರ ಪಿತೂರಿ ಮಾಡಿದವರೆಲ್ಲಾ ಸತ್ಯ ಹರಿಶ್ಚಂದ್ರರಾ? ಮನುಷ್ಯನಲ್ಲಿ ಕೆಲವು ಸಹಜ ಗುಣಗಳಿರುತ್ತವೆ. ಹಾಗಾಗಿ ನಾವು ಎಚ್ಚರದಿಂದ ಇರಬೇಕು ಎಂದು ಹೆಚ್ ಡಿಕೆ ಹೇಳಿದ್ರು.
ನಾನು ಯಾಕೆ ಒಪ್ಪಂದ ಮಾಡಿಕೊಳ್ಳಲಿ: ಹೆಚ್ಡಿಕೆ ಕಾಂಗ್ರೆಸ್ ಮೇಲೆ ಸಾಫ್ಟ್ ಕಾರ್ನರ್ ವಿಚಾರವಾಗಿ ಮಾತನಾಡಿ, ನಾನು ಯಾವುದೇ ಪಕ್ಷದ ಮೇಲೂ ಸಾಪ್ಟ್ ಕಾರ್ನರ್ ಇಲ್ಲ ಎಂದರು. ವರುಣಾದಲ್ಲಿ ಬಿಜೆಪಿ ಜೊತೆ ಒಳ ಒಪ್ಪಂದ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಯಾಕೆ ಒಪ್ಪಂದ ಮಾಡಿಕೊಳ್ಳಲಿ. ಮಾಜಿ ಶಾಸಕನನ್ನು ನಿಲ್ಲಿಸಿದ್ದೇನೆ, ಗೆಲ್ಲಿಸಿಕೊಂಡು ಬರ್ತಿವಿ. ನಮ್ಮ ಅಭ್ಯರ್ಥಿಯ ಗೆಲುವು ಮುಖ್ಯ ಹೊರತು, ಇನ್ನೊಬ್ಬರ ಅಭ್ಯರ್ಥಿಯನ್ನು ಸೋಲಿಸುವುದಕ್ಕಾಗಲಿ, ಗೆಲ್ಲಿಸುವುದಕ್ಕಾಗಲಿ ಅಭ್ಯರ್ಥಿಯನ್ನು ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.
ತುಮಕೂರಿನಲ್ಲಿ ದೇವೇಗೌಡ್ರು ಸೋಲಲು ಕಾಂಗ್ರೆಸ್ ಕಾರಣ. ಅಂತವರು, ಇಂತವರು ಅಂತಾ ಯಾರ ಹೆಸರು ಹೇಳಲ್ಲ ಎಂದು ತಿಳಿಸಿದರು. ಮಾಜಿ ಶಾಸಕ ಷಫಿ ಅಹಮದ್ ಪಕ್ಷ ಸೇರ್ಪಡೆ ಆಗುವ ನಿರ್ಧಾರ ಮಾಡಿದಾಗ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಮಾಡೋದು ಬೇಡ ತುಮಕೂರಿನಲ್ಲಿಯೇ ಈ ಕಾರ್ಯಕ್ರಮ ಮಾಡೋಣ ಎಂದಿದ್ದೆ ಎಂದು ಹೇಳಿದರು.