ತುಮಕೂರು:''ಶಿವಮೊಗ್ಗದಲ್ಲಿ ಕಲ್ಲು ತೂರಾಟ ಪ್ರಕರಣ ಕಾಂಗ್ರೆಸ್ನಿಂದಲೇ ಆಗಿದೆ ಎಂಬ ಕೆ.ಎಸ್.ಈಶ್ವರಪ್ಪನವರ ಹೇಳಿಕೆಗೆ ಜನ ಉತ್ತರ ಕೊಟ್ಟಿದ್ದಾರೆ. ಘಟನೆ ನಡೆಯುವುದಕ್ಕೂ ಮುನ್ನವೇ ನಾವು ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಆದ್ರೂ ಕೂಡಾ ಸಣ್ಣ ಘಟನೆ ನಡೆದು ಹೋಗಿದೆ'' ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ತುಮಕೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಈ ಘಟನೆ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು. ಅದನ್ನು ಬಿಟ್ಟು ಅನಾವಶ್ಯಕವಾಗಿ ಮಾತನಾಡಿ ಪ್ರಚೋದನೆ ಮಾಡುವುದು ಸರಿಯಲ್ಲ ಎನ್ನುವುದನ್ನು ಈಶ್ವರಪ್ಪನವರು ಅರ್ಥ ಮಾಡಿಕೊಳ್ಳಬೇಕು'' ಎಂದರು.
ಮೆರವಣಿಗೆಯಲ್ಲಿ ಅಸ್ತ್ರ ಪ್ರದರ್ಶನ ವಿಚಾರ: ''ನಾನು ಕೂಡ ಈ ಕುರಿತು ವಿಚಾರ ಮಾಡಿದ್ದೇನೆ. ಮರದ ತುಂಡಿಗೆ ಅಸ್ತ್ರವೆಂಬಂತೆ ಬಣ್ಣ ಲೇಪಿಸಿ, ಅದನ್ನು ಪ್ರದರ್ಶನ ಮಾಡಿದ್ದಾರೆ ಎಂದು ಎಸ್ಪಿ ಮಾಹಿತಿ ಕೊಟ್ಟಿದ್ದಾರೆ. ಅಂತಹದ್ದು ಏನೂ ನಡೆದಿಲ್ಲ'' ಎಂದು ಗೃಹ ಸಚಿವರು ಮಾಹಿತಿ ನೀಡಿದರು.
''ಮೊದಲೇ ನಾವು ಸಾಕಷ್ಟು ಪೊಲೀಸರನ್ನು ನಿಯೋಜನೆ ಮಾಡಿದ್ವಿ. ಈ ಹಿಂದೆ, ಶಿವಮೊಗ್ಗದಲ್ಲಿ ನಡೆದ ಘಟನೆಗಳು ನಮಗೆ ಗೊತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೆವು. ಕಲ್ಲು ತೂರಾಟ ನಡೆಸಿದ ಹಲವರನ್ನು ಅರೆಸ್ಟ್ ಮಾಡಲಾಗಿದೆ. ಸಿಸಿಟಿವಿಯಲ್ಲಿ ಕಂಡವರನ್ನು ವಿಚಾರಣೆಗೆ ಒಳಪಡಿಸುತ್ತೇವೆ. ಯಾವುದೇ ಗಲಭೆ ಈಗ ಇಲ್ಲ. ನಿನ್ನೆಯೇ ಎಲ್ಲವೂ ಮುಗಿದು ಹೋಗಿದೆ'' ಎಂದರು.