ತುಮಕೂರು :ಜನರ ರಕ್ತವನ್ನು ಹೀರುತ್ತಿದ್ದ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡುವ ಮೂಲಕ ನಮ್ಮ ಸರ್ಕಾರ ತಾಕತ್ತು ಧೈರ್ಯವನ್ನು ತೋರಿಸಿದೆ. ಅಲ್ಲದೆ ಮೋದಿಯವರು ಪ್ರಧಾನಿಯಾಗಿದ್ದರಿಂದಲೇ ಭಯೋತ್ಪಾದನೆಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ತುಮಕೂರಿನ ವಿನಾಯಕ ನಗರದಲ್ಲಿ ಶಕ್ತಿ ಕೇಂದ್ರ ಪ್ರಮುಖರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಶಕ್ತಿ ಕೇಂದ್ರದ ಸಭೆಯು ಕಾರ್ಯಕರ್ತರ ಮಹತ್ವವನ್ನು ಎತ್ತಿ ಹಿಡಿಯುತ್ತಿದೆ. ಬಿಜೆಪಿ ಯಾವುದೇ ಗಿಮಿಕ್ ಮೇಲೆ ನಡೆಯುವುದಿಲ್ಲ. ಸಾಧನೆಯ ಆಧಾರದ ಮೇಲೆ ಮತವನ್ನು ಕೇಳುತ್ತಿದ್ದೇವೆ. ರಾಜೀವ್ ಗಾಂಧಿ ಒಮ್ಮೆ ಬಿಜೆಪಿಯು ಒಂದು ಪಕ್ಷವೇ ಎಂದು ತಾತ್ಸಾರವಾಗಿ ಪ್ರಶ್ನೆ ಕೇಳಿದ್ದರು. ಇದನ್ನು ನಾವು ಮರೆಯಬಾರದು, ಇದನ್ನು ಚಾಲೆಂಜಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು. ಆದರೆ ಇಂದು ಕಾಂಗ್ರೆಸ್ ಕೂಡ ಒಂದು ಪಕ್ಷವೇ ಎಂದು ಕೇಳುವಂತಾಗಿದೆ ಎಂದು ವ್ಯಂಗ್ಯವಾಡಿದರು. ಇಡೀ ದೇಶ ಬಿಜೆಪಿ ಪಕ್ಷವನ್ನು ಹಾಗೂ ಕಾರ್ಯಕ್ರಮವನ್ನು ಒಪ್ಪಿಕೊಂಡಿದೆ. ರಾಜ್ಯಸಭೆಯಲ್ಲಿ 370ನೇ ವಿಧಿಯನ್ನು ಜಾರಿಗೆ ತಂದ ದಿನ ನನ್ನ ಕಣ್ಣಲ್ಲಿ ಆನಂದಭಾಷ್ಪ ಬಂದಿತ್ತು. ಇದೆಲ್ಲವೂ ಸಾಧ್ಯವಾಗಿರೋದು ದೇಶದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರಿಂದ ಎಂದು ಸಚಿವರು ಹೇಳಿದರು.
ಬೇರೆ ಪಕ್ಷಗಳು ರಾಜ್ಯದಲ್ಲಿ ಅಧಿಕಾರ ಹಿಡಿದು ದೋಚಲು ಹವಣಿಸುತ್ತಿವೆ :ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, ಬೇರೆ ಪಕ್ಷಗಳು ರಾಜ್ಯದಲ್ಲಿ ಅಧಿಕಾರವನ್ನು ಹಿಡಿಯಲು ಹವಣಿಸುತ್ತಿದ್ದು, ದೋಚಲು ಯತ್ನಿಸುತ್ತಿವೆ ಎಂದು ಆರೋಪಿಸಿದರು. ಡಬಲ್ ಎಂಜಿನ್ ಸರ್ಕಾರ ಇರುವುದರಿಂದಲೇ ನಾವು ಇಷ್ಟೊಂದು ವೇಗವಾಗಿ ಅಭಿವೃದ್ಧಿಯನ್ನು ಮಾಡಲು ಸಾಧ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಒಟ್ಟಾಗಿ ಅಭಿವೃದ್ಧಿ ಕೆಲಸವನ್ನು ಮಾಡುತ್ತಿವೆ. ಕಾಂಗ್ರೆಸ್ ನವರ ಅಪ್ರಚಾರವನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಸತ್ಯವನ್ನು ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಪ್ರಚಾರದಿಂದ ದೂರ ಇರುವುದರಿಂದ ಕೇಂದ್ರ ಸರ್ಕಾರದ ಪಡಿತರ ನೀಡುವ ಯೋಜನೆಯನ್ನು ಸಿದ್ದರಾಮಯ್ಯ ಅನ್ನ ಭಾಗ್ಯ ಎಂದು ಬಳಸಿಕೊಂಡು ಚುನಾವಣೆಯನ್ನು ಗೆದ್ದಿದ್ದರು. ಯಾರೂ ಮಾಡಿದಂತಹ ಅನೇಕ ಕೆಲಸಗಳು ಅಭಿವೃದ್ಧಿ ಕೆಲಸಗಳು ಬಿಜೆಪಿಯಿಂದ ಆಗಿವೆ. ನಿರೀಕ್ಷೆ ಮಾಡಿದಂತಹ ತೆರಿಗೆ ಸಂಗ್ರಹ ಆಗಿದೆ. ಕಡಿಮೆ ಸಾಲವನ್ನು ತೆಗೆದುಕೊಳ್ಳುವಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದೇವೆ. ಹಾಗೂ ಈ ಹಿಂದಿನ ಸರ್ಕಾರಗಳಿಗೆ ಈ ರೀತಿಯಾದ ಯೋಜನೆಗಳನ್ನು ಜಾರಿಗೆ ತರುವ ಮನಸ್ಸು ಇರಲಿಲ್ಲ. ಆದರೆ ಈ ರಾಷ್ಟ್ರದಲ್ಲಿ ಮೋದಿ ಮತ್ತು ಬಿಜೆಪಿಗೆ ಪರ್ಯಾಯವಾದ ಪಕ್ಷ ಮತ್ತು ವ್ಯಕ್ತಿ ಯಾರೂ ಇಲ್ಲ, ಯಾವುದೂ ಇಲ್ಲ. ಮೋದಿ ಅವರ ಜೊತೆ ಹೋಗಿದ್ದರಿಂದ ನಾವು ಅನೇಕ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.