ತುಮಕೂರು : ಕರೆಂಟ್ ಬಿಲ್ ನಾವು ಕಟ್ಟಲ್ಲ. ಅದ್ಯಾರ ಬರ್ತಾರೊ ಬರಲಿ. ಬೆಸ್ಕಾಂ ಸಿಬ್ಬಂದಿಗೆ ವೃದ್ಧೆಯೊಬ್ಬರು ಅವಾಜ್ ಹಾಕಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಟಿ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಮೇ ತಿಂಗಳ ಬಿಲ್ ಕೊಡಲು ತೆರಳಿದ್ದ ಬೆಸ್ಕಾಂ ಸಿಬ್ಬಂದಿಗೆ, ಕಾಂಗ್ರೆಸ್ ಪಕ್ಷದವರು ಫ್ರೀ ಕೊಡ್ತಿನಿ ಅಂದಿದ್ರು. ಈಗ ನೀವು ಬಿಲ್ ಕೇಳೋಕೆ ಬಂದಿದ್ದಿರಾ? ಎಂದು ಪ್ರಶ್ನಿಸಿದ್ದಾರೆ.
ನಾವು ಬಿಲ್ ಕಟ್ಟಲ್ಲ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರನ್ನು ಕೇಳಿ ಎಂದು ತಿಳಿಸಿದ್ದಾರೆ. ಸರ್ಕಾರ ಬಂದ ಮೇಲೇ ಕರೆಂಟ್ ಫ್ರೀ ಅಂದಿದ್ರು. ಈಗ ನೀವು ಬಿಲ್ ಕೇಳಬೇಡಿ. ಇನ್ಮೆಲಿಂದ ನಮ್ಮೂರಿಗೆ ಬಿಲ್ ಕೇಳೋಕೆ ಬರಬೇಡಿ ಎಂದು ಮಹಿಳೆ ಬೆಸ್ಕಾಂ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ.
ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಪಾವತಿಗೆ ಮಹಿಳೆ ನಿರಾಕರಣೆ : ಇನ್ನೊಂದೆಡೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾಸಿಕ ರಾಜ್ಯದ ಪ್ರತಿ ಮನೆಗೂ ತಲಾ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇನೆ ಎಂಬ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಇದೀಗ ಜೆಸ್ಕಾಂ ಇಲಾಖೆಯ ಸಿಬ್ಬಂದಿಯನ್ನು ಪೇಚಿಗೆ ಸಿಲುಕಿಸಿದೆ.
ವಿದ್ಯುತ್ ಬಿಲ್ ಹಿಡಿದು ಹೋಗುತ್ತಿರುವ ಜೆಸ್ಕಾಂ ಸಿಬ್ಬಂದಿಯೊಂದಿಗೆ ಅಲ್ಲಲ್ಲಿ ಜನ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಜಗಳ ಕಾಯುತ್ತಿರುವ ಮಧ್ಯೆಯೇ ಇದೀಗ ಕಾರಟಗಿ ತಾಲ್ಲೂಕಿನ ಕುಂಟೋಜಿ ಗ್ರಾಮದಲ್ಲಿ ಮಹಿಳೆಯೊಬ್ಬರು ರಂಪಾಟ ತೆಗೆದಿರುವ ಘಟನೆ ನಡೆದಿದೆ.
ಪ್ರತಿ ತಿಂಗಳಿನಂತೆ ಕಾರಟಗಿ ವಿಭಾಗದ ಜೆಸ್ಕಾಂ ಸಿಬ್ಬಂದಿ ಕುಂಟೋಜಿ ಗ್ರಾಮದ ವಿದ್ಯುತ್ ಬಳಕೆದಾರರ ಮನೆಗೆ ಬಿಲ್ ನೀಡಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಮಹಿಳೆಯೊಬ್ಬರು ಬಿಲ್ ಕಟ್ಟುವುದಿರಲಿ, ಬಿಲ್ ಪ್ರತಿ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ.