ತುಮಕೂರು: ಜಿಲ್ಲೆಯಲ್ಲೂ ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಒಂದೇ ವರ್ಷದಲ್ಲಿ ಕರಡು ಪಟ್ಟಿಯಲ್ಲಿ 21,990 ಮತದಾರರ ಹೆಸರು ಕಡಿತವಾಗಿದೆ ಎಂದು ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹಮದ್ ಆರೋಪಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮತದಾರರ ಕರಡು ಪ್ರತಿಯಲ್ಲಿ ಲೋಪ ಕಂಡು ಬಂದಿದೆ. ತುಮಕೂರು ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರ ಕರಡು ಪಟ್ಟಿಯಲ್ಲಿ 21,990 ಮತದಾರ ಹೆಸರು ಮಿಸ್ಸಿಂಗ್ ಆಗಿವೆ. ಇದರಲ್ಲಿ 4,400 ಮುಸ್ಲಿಂ ಮತದಾರರು ಇದ್ದಾರೆ. ಮತದಾರರ ಕರಡು ಪ್ರತಿ ಅಸ್ಪಷ್ಟವಾಗಿದೆ ಎಂದರು.
ಕಾಂಗ್ರೆಸ್ ಮಾಜಿ ಶಾಸಕ ರಫೀಕ್ ಅಹಮದ್ ಮಾಧ್ಯಮಗೋಷ್ಟಿ ಕರಡು ಪ್ರತಿಯಲ್ಲಿ ಸೇರ್ಪಡೆ ಹಾಗೂ ಡಿಲೀಟ್ ಆದ ಮತದಾರರ ಮಾಹಿತಿ ಇಲ್ಲ. ಈ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾಹಿತಿ ನೀಡಿಲ್ಲ. ಅಲ್ಪಸಂಖ್ಯಾತರಿರುವ ವಾರ್ಡ್ಗಳಲ್ಲಿ ಮತದಾರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಚುನಾವಣಾ ಆಯೋಗ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇನೆ. ಚುನಾವಣಾ ಬಿಎಲ್ಒಗಳ ನಿರ್ಲಕ್ಷ್ಯದಿಂದ ಮತದಾರರ ಹೆಸರು ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದು ಹೇಳಿದರು.
ಇದನ್ನೂ ಓದಿ:ಕಾಂಗ್ರೆಸ್ನಿಂದ 1.50 ಲಕ್ಷಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರ ಹೆಸರು ಅಕ್ರಮ ಸೇರ್ಪಡೆ: ಎನ್ ಆರ್ ರಮೇಶ್
2019 ರಿಂದ 2022ರ ವರೆಗೆ ಮತದಾರರ ಪಟ್ಟಿಯಲ್ಲಿ 6,664 ಮತದಾರರನ್ನು ಕೈ ಬಿಡಲಾಗಿತ್ತು. 2022 ರಲ್ಲಿ ಒಟ್ಟು 2,62,155 ಮತದಾರರಿದ್ದರು. 2023 ರಲ್ಲಿ ಪರಿಷ್ಕರಣೆಗೊಂಡ ಕರಡು ಪಟ್ಟಿಯಲ್ಲಿ 2,40,165 ಮಂದಿ ಮತದಾರರಿದ್ದಾರೆ. ಈ ಒಂದು ವರ್ಷದ ಅವಧಿಯಲ್ಲಿ 21,990 ಮತದಾರರು ಕಡಿಮೆಯಾಗಿದ್ದಾರೆ. 2023ರ ಮತದಾರರ ಪರಿಷ್ಕರಣೆಯ ಕರಡು ಪ್ರತಿಯಲ್ಲಿ ಹೊಸದಾಗಿ ಸೇರ್ಪಡೆಗೊಂಡವರ ಮಾಹಿತಿ ನೀಡಿಲ್ಲ. ಮತಪಟ್ಟಿಯಲ್ಲಿ ಕೈ ಬಿಡಲಾಗಿರುವ ಮತದಾರ ಸಂಖ್ಯೆಯೇ ಹೆಚ್ಚಿದೆ ಎಂದು ಆರೋಪಿಸಿದರು.