ಮನೆ ಮನೆಗೆ ತೆರಳಿ ಮತಯಾಚಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತುಮಕೂರು:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಇಂದು ತುಮಕೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಗಣೇಶ್ ಪರವಾಗಿ ಮತ ಭಿಕ್ಷೆ ಕೇಳಿದರು. ಇದೇ ಸಂದರ್ಭದಲ್ಲಿ ವಯೋವೃದ್ಧರ ಕಾಲಿಗೆ ಬಿದ್ದು ಮತಯಾಚನೆ ಮಾಡಿದ್ದು ವಿಶೇಷವಾಗಿತ್ತು.
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಕಟೀಲ್, 224 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಆದಮೇಲೆ ರಾಷ್ಟ್ರೀಯ, ರಾಜ್ಯ ನಾಯಕರ ರೋಡ್ ಶೋ ಮೂಲಕ ಮತಯಾಚನೆ ನಡೆಯುತ್ತಿದೆ. ಅದೇ ರೀತಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬೇಕು ಎಂದರು.
ನಮ್ಮ ರಾಷ್ಟ್ರೀಯ ನಾಯಕರು ಪ್ರವಾಸವಿರುವ ಕಡೆ ಬೆಳಗ್ಗೆ ಮನೆ ಮನೆ ಪ್ರಚಾರ ಮಾಡುತ್ತಾರೆ. ನಾನು ಹಾಗೂ ನಮ್ಮ ಹಿರಿಯರು ಪ್ರವಾಸ ಹೋದ ಸ್ಥಳಗಳಲ್ಲಿ ಮನೆಗಳಿಗೆ ಭೇಟಿ ನೀಡಿ ಮತಯಾಚನೆ ಮಾಡುತ್ತೇವೆ. ಅಭೂತಪೂರ್ವ ಸ್ಪಂದನೆ ಬಿಜೆಪಿಗೆ ಸಿಗುತ್ತಿದೆ. ನಮ್ಮ ಸರ್ಕಾರದ ಸಾಧನೆಗಳನ್ನು ನಮಗಿಂತ ಮೊದಲೇ ಜನರೇ ಹೇಳುತ್ತಿದ್ದಾರೆ. ವಾತಾವರಣ ಬಿಜೆಪಿ ಪರವಾಗಿದೆ ಎಂದು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ನಾಲಾಯಕ್ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ನಾಲಾಯಕ್ ಅಂತ ಹೇಳಿ ಖರ್ಗೆಯನ್ನು ಕಲಬುರ್ಗಿಯಿಂದ ಹೊರಗಿಟ್ಟಿದ್ದಾರೆ. ಈ ಬಾರಿ ಪ್ರಿಯಾಂಕ್ ಖರ್ಗೆಯನ್ನೂ ಅಲ್ಲಿಂದ ಓಡಿಸುತ್ತಾರೆ. ಕಾಂಗ್ರೆಸ್ಸೇ ನಾಲಾಯಕ್ ಅಂತ ಜನರು ದೇಶದಿಂದ ಹೊರಗಿಟ್ಟಿದ್ದಾರೆ. ಅದಕ್ಕಾಗಿ ಮೋದಿಯವರಿಗೆ ಎರಡೆರಡು ಬಾರಿ ಬಹುಮತ ನೀಡಿದ್ದಾರೆ. ಜಗತ್ತೇ ನರೇಂದ್ರ ಮೋದಿಯವರನ್ನು ಕೊಂಡಾಡುತ್ತಿದೆ. ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆಯವರನ್ನು ಮನೆಯಲ್ಲಿ ಕೊಂಡಾಡಲ್ಲ, ಇಂತಹ ಮನುಷ್ಯ ರಾಷ್ಟ್ರದ ಪ್ರಧಾನಿ ಬಗ್ಗೆ ಮಾತನಾಡುವ ಯಾವ ಯೋಗ್ಯತೆಯಿದೆ ಎಂದು ಟೀಕಿಸಿದರು.
ಪ್ರಿಯಾಂಕ್ ಖರ್ಗೆಗೆ ಕ್ಷೇತ್ರದ ಜನ ಬಹಿಷ್ಕಾರ ಹಾಕುತ್ತಿದ್ದಾರೆ. ಅವರು ಐದು ವರ್ಷ ಶಾಸಕರಾಗಿ ಕ್ಷೇತ್ರಕ್ಕೆ ಅನುದಾನ ತಂದಿಲ್ಲ. ಇದೇ ಕಾರಣಕ್ಕೆ ಕ್ಷೇತ್ರದ ಜನ ಬಹಿಷ್ಕಾರ ಹಾಕುತ್ತಿದ್ದಾರೆ. ಕಲಬುರಗಿಯಲ್ಲಿ 5 ವರ್ಷದಲ್ಲಿ ಅನುದಾನ ಕೊಡಲು ವಿಫಲವಾಗಿದ್ದಾರೆ. ಕಾಂಗ್ರೆಸ್ನಲ್ಲಿರುವ ಕಲಬುರ್ಗಿಯ ಎಲ್ಲ ಜನರು ರಾಜೀನಾಮೆ ನೀಡಿ ಬಿಜೆಪಿ ಸೇರುತ್ತಿದ್ದಾರೆ ಎಂದು ತಿಳಿಸಿದರು.
ಜನತೆಯಿಂದ ತಿರಸ್ಕಾರಕ್ಕೆ ಒಳಗಾದ ಒಬ್ಬ ವ್ಯಕ್ತಿ ಜಗತ್ತೇ ಮೆಚ್ಚುವಂಥ ಪ್ರಧಾನಿ ಬಗ್ಗೆ ಮಾತಾಡೋದು ಖಂಡನೀಯ. ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ಇನ್ನು ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ಹಾಲು, ಗ್ಯಾಸ್ ಸಿಲಿಂಡರ್ ಉಚಿತವಾಗಿ ಕೊಡುವ ವಿಚಾರ ಕುರಿತು ಮಾತನಾಡಿದ ಕಟೀಲ್, ಬಹಳ ಕಡು ಬಡತನದಲ್ಲಿ ಇರುವ ಬಿಪಿಎಲ್ ಕಾರ್ಡುದಾರರಿಗೆ ಜನರಿಗೆ ಹಬ್ಬಗಳಲ್ಲಿ ಸಮಸ್ಯೆಯಾಗಬಾರದು ಅಂತ ಇವುಗಳನ್ನು ಕೊಡಲಿದ್ದೇವೆ. ಉಚಿತ ಗ್ಯಾಸ್ ಗ್ಯಾಸ್ ಸಿಲಿಂಡರ್ ಕೂಡ ಘೋಷಣೆ ಮಾಡಿದ್ದೀವಿ ಎಂದು ತಿಳಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಭಜರಂಗದಳ, PFI ನಿಷೇಧ, ಜನರಿಗೆ ಮತ್ತಷ್ಟು ಉಚಿತಗಳ ಭರವಸೆ