ತುಮಕೂರು: ತುಂಬಿ ಹರಿಯುತ್ತಿದ್ದ ಹಳ್ಳಕ್ಕೆ ಬಿದ್ದು ಕೊಚ್ಚಿ ಹೋಗುತ್ತಿದ್ದ ಇಬ್ಬರು ದ್ವಿಚಕ್ರ ವಾಹನ ಸವಾರರನ್ನು ಗ್ರಾಮಸ್ಥರು ಹಗ್ಗ ಹಾಕಿ ಎಳೆದು ರಕ್ಷಿಸಿದರು. ಈ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ತೋಣಚಗೊಂಡನಹಳ್ಳಿ ಸಮೀಪ ನಡೆದಿದೆ.
ಜಿಲ್ಲೆಯಲ್ಲಿ ನಿರಂತರವಾಗಿ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿವೆ. ಮಧುಗಿರಿ ತಾಲೂಕಿನಲ್ಲಿಯೂ ಕೂಡ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದರಿಂದ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ಇಬ್ಬರು ಬೈಕ್ ಸವಾರರು ಹಳ್ಳದ ನೀರು ದಾಟಲು ಪ್ರಯತ್ನಿಸುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಕೊಚ್ಚಿ ಹೋಗಿದ್ದಾರೆ.