ಕರ್ನಾಟಕ

karnataka

ETV Bharat / state

ಸ್ಮಶಾನಕ್ಕಿಲ್ಲ ದಾರಿ: ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದ ಗ್ರಾಮಸ್ಥರು - ಸಾರ್ವಜನಿಕ ಸ್ಮಶಾನ

ಸ್ಮಶಾನ ಜಾಗಕ್ಕೆ ತೆರಳಲು ದಾರಿ ಇಲ್ಲದ ಹಿನ್ನೆಲೆ ರಸ್ತೆ ಬದಿಯಲ್ಲೇ ಗ್ರಾಮಸ್ಥರು ಅಂತ್ಯಸಂಸ್ಕಾರ ಮಾಡಿದ ಘಟನೆ ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

Villagers cremated on the roadside
ರಸ್ತೆ ಬದಿಯಲ್ಲಿ ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು

By ETV Bharat Karnataka Team

Published : Dec 27, 2023, 10:51 AM IST

Updated : Dec 27, 2023, 12:15 PM IST

ರಸ್ತೆ ಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದ ಗ್ರಾಮಸ್ಥರು

ತುಮಕೂರು : ಅದು ಬರೋಬ್ಬರಿ 300 ಮನೆಗಳಿರೋ ಗ್ರಾಮ. ಆದರೆ, ಈವರೆಗೂ ಸಾರ್ವಜನಿಕ ಸ್ಮಶಾನವೇ ಇಲ್ಲ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ರು ಪ್ರಯೋಜನವಾಗಿಲ್ಲ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ಬದಿಯಲ್ಲೇ ಮೃತರೊಬ್ಬರ ಶವಸಂಸ್ಕಾರ ಮಾಡಿದ್ದಾರೆ.

ಹೌದು, ರಸ್ತೆ ಪಕ್ಕದಲ್ಲಿ ಶವಸಂಸ್ಕಾರ ಮಾಡಿ ಪೂಜೆ ಮಾಡುತ್ತಿರೋ ಪುತ್ರ. ಜೆಸಿಬಿ, ಟ್ರ್ಯಾಕ್ಟರ್ ತಂದು ಅಂತ್ಯ ಸಂಸ್ಕಾರ ಮಾಡಿರೋ ಶವವನ್ನು ಸ್ಥಳಾಂತರಿಸಲು ಪರದಾಡ್ತಿರೋ ಕಂದಾಯ ಇಲಾಖೆ ಅಧಿಕಾರಿಗಳು. ಶವ ಬೇರೆಡೆ ಸ್ಥಳಾಂತರಿಸಲು ಪಟ್ಟು ಬಿಡದೇ ಕುಳಿತಿರೋ ಗ್ರಾಮಸ್ಥರು. ಇದೆಲ್ಲಾ ದೃಶ್ಯ ಕಂಡು ಬಂದಿದ್ದು ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ದುರ್ಗದಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನವೇ ಇರಲಿಲ್ಲ. ಇತ್ತಿಚೆಗಷ್ಟೇ ಸ್ಮಶಾನ ಮಂಜೂರು ಮಾಡಿಕೊಟ್ಟಿದ್ದರೂ ಕೂಡ ಕಲ್ಲುಬಂಡೆಯಿಂದಲೇ ತುಂಬಿರೋ ಆ ಜಾಗದಲ್ಲಿ ಮಣ್ಣು ಮಾಡಲು ಸಾಧ್ಯವಾಗ್ತಿಲ್ಲ. ಆ ಸ್ಮಶಾನದ ಜಾಗಕ್ಕೆ ತೆರಳಲು ರಸ್ತೆಯೂ ಇಲ್ಲ. ಹೀಗಾಗಿ, ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದ ಗ್ರಾಮದ ಪೆದ್ದಯ್ಯ ಎನ್ನುವರ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ರಸ್ತೆ ಬದಿಯಲ್ಲಿಯೇ ಮಾಡಿ ಮುಗಿಸಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ದುರ್ಗದಹಳ್ಳಿ ಗ್ರಾಮಕ್ಕೆ ಸಾರ್ವಜನಿಕ ಸ್ಮಶಾನ ಮಂಜೂರು ಮಾಡಿಕೊಡುವಂತೆ ಗ್ರಾಮಸ್ಥರು ತಹಶೀಲ್ದಾರ್​ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ರು. ಆದ್ರೆ, ತಹಶೀಲ್ದಾರ್ ಸ್ಮಶಾನ ಮಂಜೂರಾತಿಗೆ ಕ್ರಮ ಕೈಗೊಂಡಿರಲಿಲ್ಲ. ಅರೆಗುಜ್ಜನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿದ್ದು, ತಾಲೂಕು ಆಡಳಿತ ಬೆಟ್ಟದ ಮೇಲೆ ಸ್ಮಶಾನ ಭೂಮಿಗೆ ಮಂಜೂರಾತಿ ನೀಡಿದೆ. ಆದರೆ, ಅಲ್ಲಿಗೆ ದಾರಿಯಿಲ್ಲ. ಹೀಗಾಗಿ ಬಡವರ ಕೂಗಿಗೆ ತಹಶೀಲ್ದಾರ್ ಕಚೇರಿಯಲ್ಲಿ ಬೆಲೆ ಇಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ಸ್ಮಶಾನವಿಲ್ಲದೆ ಗ್ರಾಮ ಪಂಚಾಯತ್ ಮುಂದೆಯೇ ಶವಸಂಸ್ಕಾರಕ್ಕೆ ಮುಂದಾದ ಗ್ರಾಮಸ್ಥರು..!

ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇಂತಹ ಘಟನೆಗಳು ಎಲ್ಲಿಯೂ ನಡೆಯಬಾರದು ಅನ್ನೋದೆ ನಮ್ಮ ಕಳಕಳಿ. ಈ ವಿಚಾರ ನನ್ನ ಗಮನಕ್ಕೆ ಬಂದ ತಕ್ಷಣ ನಾನೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಹಶೀಲ್ದಾರ್ ಅವರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿ ಬೇರೆ ಕಡೆ ಅಂತ್ಯಸಂಸ್ಕಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ವಿಚಾರವಾಗಿ ನಾವು ಪಿಡಿಒ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಅವರು ಸ್ಮಶಾನಕ್ಕೆ ದಾರಿ ಮಾಡಿಕೊಟ್ಟಿದ್ದಿದ್ರೆ ಸಮಸ್ಯೆಯೇ ಆಗ್ತಾ ಇರಲಿಲ್ಲ. ಮೃತರ ಕುಟುಂಬಸ್ಥರು ರಸ್ತೆ ಪಕ್ಕದಲ್ಲಿ ಮಣ್ಣು ಮಾಡಬಾರದಿತ್ತು. ಆದರೆ, ಎಲ್ಲೋ ಒಂದು ಕಡೆ ಅವರು ನಮ್ಮ ಕಣ್ಣು ತೆರೆಸೋ ಕೆಲಸ ಮಾಡಿದ್ದಾರೆ" ಎಂದರು. ಇನ್ನೊಂದೆಡೆ, ಈ ವಿಚಾರ ಸುದ್ದಿಯಾಗ್ತಿದ್ದಂತೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಸ್ಮಶಾನಕ್ಕೆ ಸೂಕ್ತ ಜಾಗ ಹುಡುಕುವ ಕೆಲಸ ಮಾಡ್ತಿದ್ದಾರೆ.

Last Updated : Dec 27, 2023, 12:15 PM IST

ABOUT THE AUTHOR

...view details