ತುಮಕೂರು :ಶಿರಾದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ಈ ವೇಳೆ ಬಿಜೆಪಿ ಪಕ್ಷವು ಯಾವ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತದೆಯೋ ಅವರ ವಿರೋಧ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಮೂಲಕ ಬಿಜೆಪಿಯನ್ನು ತಕ್ಕ ಪಾಠ ಕಲಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ತಿಳಿಸಿದರು.
ನಗರದ ಟೌನ್ ಹಾಲ್ ವೃತ್ತದಲ್ಲಿ ವಿವಿಧ ರೈತಪರ ಸಂಘಟನೆಗಳು ಹಾಗೂ ಸಮಾಜಮುಖಿ ಸಂಘಟನೆಗಳು ಪ್ರತಿಭಟನಾ ಉಪವಾಸ ಸತ್ಯಾಗ್ರಹ ನಡೆಸಿದವು.
ಈ ವೇಳೆ, ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆಯ ತಿದ್ದುಪಡಿ ಹಾಗೂ ಕೃಷಿ ಉತ್ಪನ್ನ ವಾಣಿಜ್ಯ ಮತ್ತು ಮಾರಾಟ ಕಾಯ್ದೆ, ಕಾರ್ಮಿಕ ವಿರೋಧಿ ಕಾಯ್ದೆ ವಿದ್ಯುತ್ ಕಾಯ್ದೆ ಜಾರಿಗೊಳಿಸಿರುವುದನ್ನು ವಿರೋಧಿಸಿ ಸರ್ಕಾರ ಈ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ಶಿರಾದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧವಾಗಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂದರು.
ಅಷ್ಟೇ ಅಲ್ಲದೇ ಬಿಜೆಪಿ ಪಕ್ಷವು ಯಾವ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸುತ್ತದೆಯೋ ಆ ಎಲ್ಲ ಕ್ಷೇತ್ರಗಳಲ್ಲಿಯೂ ರೈತ ಮುಖಂಡರು ಬಿಜೆಪಿಯ ವಿರೋಧ ಪಕ್ಷಗಳಿಗೆ ತಮ್ಮ ಮತಗಳನ್ನು ಚಲಾಯಿಸುವ ಮೂಲಕ ಬಿಜೆಪಿ ಪಕ್ಷವನ್ನು ಸೋಲಿಸುವ ಕಾರ್ಯ ಮಾಡುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದು ತಿಳಿಸಿದರು.