ತುಮಕೂರು:ಜಿಲ್ಲೆಯ ಕೊರಟಗೆರೆ ತಾಲೂಕಿನ ತೊಗರಿಘಟ್ಟ ಗ್ರಾಮದಲ್ಲಿನ ಕೋಳಿ ಪಾರಂನಲ್ಲಿ ತ್ಯಾಜ್ಯ ನಿರ್ವಹಣೆ ಆಗದೇ ಸಮಸ್ಯೆ ತಲೆತೋರಿದೆ. ಗ್ರಾಮಸ್ಥರಿಗೆ ಕಿರಿಕಿರಿ ಆಗುತ್ತಿದೆ. ಸುತ್ತಲಿನ ಗ್ರಾಮಗಳಲ್ಲಿ ನೊಣಗಳ ಹಾವಳಿ ಹೆಚ್ಚಾಗಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ತೊಗರಿಘಟ್ಟ ಗ್ರಾಮದ ಕೋಳಿ ಫಾರಂನಲ್ಲಿ ತ್ಯಾಜ್ಯ ನಿರ್ವಹಣೆ ಮಾಡದ ಹಿನ್ನೆಲೆ ನೊಣಗಳ ಸಂಖ್ಯೆ ಹೆಚ್ಚಾಗಿ ಜನರು ಹಾಸಿಗೆ ಹಿಡಿಯುವ ಪರಿಸ್ಥಿತಿ ಎದುರಾಗಿದೆ. ಮೊಟ್ಟೆ ಹಾಗೂ ಕೋಳಿಯ ಗೊಬ್ಬರವನ್ನು ತೆರವುಗೊಳಿಸದೆ ಹಾಗೆಯೇ ಬಿಡಲಾಗಿದ್ದು, ಕೋಳಿಯ ಗೊಬ್ಬರದ ದುರ್ವಾಸನೆಯಿಂದ ಅನೈರ್ಮಲ್ಯ ಹೆಚ್ಚಾಗಿ ಎಲ್ಲೆಂದರಲ್ಲಿ ನೊಣಗಳು ಕಂಡುಬರುತ್ತಿವೆ. ಇದರಿಂದ ಗ್ರಾಮಸ್ಥರಿಗೆ ಕೆಮ್ಮು-ನೆಗಡಿ ಮತ್ತು ಜ್ವರದಂತಹ ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆ ಸೇರುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೋಳಿ ಫಾರ್ಮ್ ನಿರ್ವಹಣೆ ವಿಫಲತೆಯಿಂದ ಮತ್ತು ಮಾಲೀಕನ ನಿರ್ಲಕ್ಷ್ಯದಿಂದಾಗಿ ಬೇಸತ್ತಿರುವ ಕೆಲ ಗ್ರಾಮಸ್ಥರು ಗುಳೆ ಹೋಗುತ್ತಿದ್ದಾರೆ. ಈ ಕುರಿತು ಬೊಮ್ಮಲದೇವಿಪುರ, ಶಿರಿಗೋನಹಳ್ಳಿ, ತೊಗರಿಘಟ್ಟ, ಶಕುನಿತಿಮ್ಮನಹಳ್ಳಿ, ಬುಡುಮಾರನಹಳ್ಳಿ, ಕಳ್ಳಿಪಾಳ್ಯ, ಮುದ್ದನಹಳ್ಳಿ, ದುಗ್ಗೇನಹಳ್ಳಿಯ ಗ್ರಾಮಸ್ಥರು ಕೋಳಿ ಫಾರಂ ವಿರುದ್ಧ ಕೊರಟಗೆರೆ ತಹಶೀಲ್ದಾರ್ ಮತ್ತು ಬಿ.ಡಿ. ಪುರ ಗ್ರಾ.ಪಂ ಪಿಡಿಓಗೆ ದೂರು ನೀಡಿದ್ದಾರೆ.