ತುಮಕೂರು:ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆ ಹಾಗೂ ವಾಪಸ್ ಪಡೆಯುವ ಪ್ರಕ್ರಿಯೆಗಳೆಲ್ಲಾ ಮುಗಿದಿದ್ದು, ಅಂತಿಮವಾಗಿ 168 ಗ್ರಾಮ ಪಂಚಾಯಿತಿಗಳ 2,630 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಜಿಲ್ಲೆಯ ಐದು ತಾಲೂಕುಗಳ 156 ಸದಸ್ಯ ಸ್ಥಾನಗಳಿಗೆ ಈಗಾಗಲೇ ಅವಿರೋಧ ಆಯ್ಕೆ ನಡೆದಿದೆ. ಈಗಾಗಲೇ ಕೆಲವು ಸದಸ್ಯ ಸ್ಥಾನಗಳಿಗೆ ಒಂದೇ ನಾಮಪತ್ರ ಸಲ್ಲಿಕೆ ಇದ್ದರೆ ಕೆಲವು ಕ್ಷೇತ್ರಗಳಲ್ಲಿ ಎರಡಕ್ಕಿಂತ ಹೆಚ್ಚು ಮಂದಿ ಸ್ಪರ್ಧಿಸಿದ್ದರು. ಹೀಗಾಗಿ ಸ್ಥಳೀಯವಾಗಿ ಪ್ರತಿಸ್ಪರ್ಧಿಗಳ ಮನವೊಲಿಸಿ ನಾಮಪತ್ರ ವಾಪಸ್ ಪಡೆಯುವ ಮೂಲಕ ಅವಿರೋಧ ಆಯ್ಕೆಯ ಪ್ರಕ್ರಿಯೆಗಳು ನಡೆದಿರುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 65 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಇನ್ನು ಕುಣಿಗಲ್ ತಾಲೂಕಿನಲ್ಲಿ 37 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದರೆ, ಕೊರಟಗೆರೆ ತಾಲೂಕಿನಲ್ಲಿ 25 ಸದಸ್ಯ ಸ್ಥಾನಗಳಿಗೆ, ಪಾವಗಡ ತಾಲೂಕಿನಲ್ಲಿ 16 ಸದಸ್ಯ ಸ್ಥಾನಗಳಿಗೆ ತುಮಕೂರು ತಾಲೂಕಿನಲ್ಲಿ 13 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ.
ಹಲವೆಡೆ ಸದಸ್ಯ ಸ್ಥಾನಗಳನ್ನು ಹರಾಜು ಹಾಕಲಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಕುಣಿಗಲ್ ತಾಲೂಕಿನ 36 ಗ್ರಾಮ ಪಂಚಾಯಿತಿಗಳಿಂದ 37 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದರೂ ಸಹ ಘೋಷಣೆಯನ್ನು ತಡೆಹಿಡಿಯಲಾಗಿದೆ. ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ 459 ಸ್ಥಾನಗಳಿಗೆ 1208 ಮಂದಿ ಕಣದಲ್ಲಿದ್ದಾರೆ.
ಕುಣಿಗಲ್ ತಾಲೂಕಿನ ಕೊತ್ತಗೆರೆ, ಮೊಳಕೆ ಹಳ್ಳಿ, ಬಿಳಿದೇವಾಲಯ, ಚೌಡನಕುಪ್ಪೆ,ಪಡವಗೆರೆ ಗ್ರಾಮಪಂಚಾಯತಿಗಳ ತಲಾ ಮೂರು ಸದಸ್ಯ ಸ್ಥಾನ, ಭಕ್ತರಹಳ್ಳಿ ಬಾಗೇನಹಳ್ಳಿ ನಡೆಮವಿನಪೂರ, ಕಿತ್ತನಾಮಂಗಲ, ನಾಗಸಂದ್ರ ಮಾರ್ಕೋನಹಳ್ಳಿ ಕೊಪ್ಪ ಗ್ರಾಮ ಪಂಚಾಯತಿಯ ತಲಾ 2 ಸದಸ್ಯರು ಹಾಗೂ ಬೇಗೂರು, ಪಿ ಹೊಸಳ್ಳಿ , ಯಲಿಯೂರು ಕೆಂಪನಹಳ್ಳಿ, ಜೋಡಿ ಹೊಸಳ್ಳಿ, ಡಿ ಹೊಸಳ್ಳಿ, ಜಿನ್ನಾಗರೆ, ಕೊಡಗಿಹಳ್ಳಿಯ ತಲಾ ಒಬ್ಬೊಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.