ಪಾವಗಡ(ತುಮಕೂರು): ರಾಜ್ಯದ ಬಿಜೆಪಿ ಸರ್ಕಾರ ರಾಜಾಕೀಯ ಜಂಜಾಟದಲ್ಲಿ ಮುಳುಗಿ ನೆರೆ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಪಾವಗಡ ಪಟ್ಟಣದ ಎಸ್ಎಸ್ಕೆ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮತ್ತು ಡಾ. ಅಬ್ದುಲ್ ಕಲಾಂ ಅವರ ಮಹಾ ವೇದಿಕೆ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಗಮಿಸಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಬರ, ನೆರೆ ತಾಂಡವವಾಡುತ್ತಿದೆ. ಯಾವುದೇ ಪರಿಹಾರ ನೀಡದ ಸರ್ಕಾರ, ಸರ್ವಪಕ್ಷಗಳ ಸಭೆ ಕರೆದು ರಾಜ್ಯದ ಪರವಾಗಿ ಕೇಂದ್ರದಲ್ಲಿ ಶಕ್ತಿ ತುಂಬುವ ಪ್ರಯತ್ನವನ್ನೂ ಕೂಡ ಮುಖ್ಯಮಂತ್ರಿಗಳು ಮಾಡುತ್ತಿಲ್ಲ.
ನಮ್ಮ ರಾಜ್ಯದ ಮುಖ್ಯಮಂತ್ರಿಗಳಿಗೆ ಪ್ರಧಾನಿ ಭೇಟಿಗೆ ಅವಕಾಶ ಸಿಗುತ್ತಿಲ್ಲ. ಇತ್ತ ಪಾರಿಹಾರವನ್ನು ನೀಡುತ್ತಿಲ್ಲ. ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ನಮ್ಮ ರಾಜ್ಯದ ಸಿಎಂಗೆ ಅವಮಾನವಾದರೆ ಅದಕ್ಕೆ ಸಂಸದರೇ ನೇರ ಕಾರಣ ಎಂದು ಗುಡುಗಿದರು. ಅಲ್ಲದೆ ಸಾಲ ಮನ್ನಾ ಕುರಿತು ಸ್ಪಷ್ಟನೆ ನೀಡದ್ದಕ್ಕೆ ರೈತರ ಮನೆಗೆ ಬ್ಯಾಂಕ್ನವರು ಬರುವಂತಾಗಿದೆ. ಈ ನಿಟ್ಟಿನಲ್ಲಿಯೂ ಕೂಡಾ ರಾಜ್ಯ ಸರ್ಕಾರ ವಿಫಲವಾಗಿದೆ ಎಂದರು.