ತುಮಕೂರು : ಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕಡಬ ಗ್ರಾಮದ ಕೆರೆಯಲ್ಲಿ ನಡೆದಿದೆ. ಮೃತ ಯುವಕರನ್ನು ಗುಬ್ಬಿ ತಾಲ್ಲೂಕಿನ ಆಡುಗೊಂಡನಹಳ್ಳಿ ಗ್ರಾಮದ ಹರೀಶ್(31) ಯೋಗೀಶ್ (36) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೆರೆ ನೀರಿನೊಳಗೆ ಮೃತದೇಹಗಳಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕಡಬ ಗ್ರಾಮದ ಕೆರೆಗೂ ಕೂಡ ನೀರು ಅಧಿಕ ಪ್ರಮಾಣದಲ್ಲಿ ಹರಿದು ಬಂದು ತುಂಬಿದೆ. ಹೀಗಾಗಿ ನಿನ್ನೆ ಶನಿವಾರ ತಮ್ಮ ಸ್ನೇಹಿತರೊಂದಿಗೆ ಈ ಯುವಕರು ಕೂಡ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ವೇಳೆ ಆಕಸ್ಮಿಕವಾಗಿ ಇಬ್ಬರೂ ಕೂಡ ಕಾಲ ಜಾರಿ ಕೆರೆಗೆ ಬಿದ್ದಿದ್ದಾರೆ. ಆದರೆ ಸುತ್ತಮುತ್ತಲಿದ್ದ ಯುವಕರು ಇವರನ್ನು ಪಾರು ಮಾಡಲು ಯತ್ನಿಸಿದರೂ ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಗೇನಕಲ್ ಫಾಲ್ಸ್ನಲ್ಲಿ ಯುವಕರು ಮುಳುಗಿ ಸಾವು : ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಶನಿವಾರ ನಡೆದಿದೆ. ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಶಬರಿ (24) ಮತ್ತು ಅಜಿತ್ (26) ಮೃತರು. ಶನಿವಾರ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ ಯುವಕರ ತಂಡ ದೇವರಿಗೆ ಪೂಜೆ ಸಲ್ಲಿಸಿ ಹೊಗೆನಕಲ್ ಜಲಪಾತಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅಜಿತ್ ಮತ್ತು ಶಬರಿ ಈಜಲು ಹೋದವರು ಮತ್ತೆ ವಾಪಸ್ ಬಂದಿರಲಿಲ್ಲ. ವಿಚಾರ ತಿಳಿದ ಸ್ನೇಹಿತರು ಹಾಗೂ ಸ್ಥಳೀಯರು ಮಲೆ ಮಹದೇಶ್ವರ ಬೆಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರ ಸಮ್ಮುಖದಲ್ಲಿ ನುರಿತ ಈಜುಗಾರರ ಸಹಾಯದಿಂದ ಬಲೆ ಹಾಕಿ ಇಬ್ಬರ ಶವ ಪತ್ತೆ ಮಾಡಲಾಗಿದ್ದು, ಮಹದೇಶ್ವರಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.