ತುಮಕೂರು:ಸರ್ಕಾರ ಆಡಳಿತ ಮಾಡುವುದರಲ್ಲಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಬೀದಿಗೆ ಬಂದು ಗಲಾಟೆ ಮಾಡಿಕೊಳ್ಳುತ್ತಿರುವ ಇಬ್ಬರು ಹಿರಿಯ ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬಹುದಿತ್ತು. ಆದರೆ ಸರ್ಕಾರ ಅದನ್ನು ಮಾಡಿಲ್ಲ ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ವರ್ಗಾವಣೆ ಮಾಡಿರುವ ಸರ್ಕಾರದ ನಿರ್ಧಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಹರಿಹಾಯ್ದಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಆಡಳಿತ ಮಾಡುವುದರಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿಯಾಗಿ ಒಳ್ಳೆ ಆಡಳಿತ ಕೊಡಲು ಒಂದು ಅವಕಾಶ ಸಿಕ್ಕಿತ್ತು. ಆದರೆ ಬೊಮ್ಮಾಯಿ ಅವರು ಅದರಲ್ಲಿ ವಿಫಲರಾಗಿದ್ದಾರೆ. ಇವತ್ತು ಇಬ್ಬರು ಅಧಿಕಾರಿಗಳು ಬೀದಿಯಲ್ಲಿ ಬಂದು ರಂಪಾಟ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಎಲ್ಲೋ ಒಂದು ಕಡೆ ಅವರ ಮೇಲೆ ಸರ್ಕಾರದ ಹಿಡಿತ ಇಲ್ಲ ಎಂಬುದು ಅರ್ಥವಾಗುತ್ತಿದೆ ಎಂದು ದೂರಿದರು.
ಸರ್ಕಾರ ಬಿಗಿಯಾಗಿದ್ದಲ್ಲಿ, ಸರ್ಕಾರ ಯಾವುದೇ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಿದ್ದರೆ ಇಂತಹ ಸನ್ನಿವೇಶಗಳು ನಡೆಯುತ್ತಿರಲಿಲ್ಲ. ಇಬ್ಬರು ಅಧಿಕಾರಿಗಳನ್ನು ಕೂಡಲೇ ಸಸ್ಪೆಂಡ್ ಮಾಡಬೇಕಿತ್ತು. ಅವರನ್ನು ರಜಾದಲ್ಲಿ ಕಳುಹಿಸುವ ಬದಲು ಅವರನ್ನು ತಕ್ಷಣ ಸಸ್ಪೆಂಡ್ ಮಾಡುವ ಅಧಿಕಾರ ಸರ್ಕಾರಕ್ಕಿರುತ್ತದೆ. ಅದರ ನಂತರ ವಿಚಾರಣೆ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದು ಎಲ್ಲವನ್ನೂ ನಂತರ ಮಾಡಬಹುದು. ಸರ್ಕಾರ ತಕ್ಷಣ ಅವರನ್ನು ಸಸ್ಪೆಂಡ್ ಮಾಡಿ, ಸಬ್ಜೆಕ್ಟ್ ಟು ಎಂಕ್ವೈರಿ ಎಂದು ಮಾಡುವುದರಿಂದ ಯಾವುದೇ ತೊಂದರೆ ಆಗುತ್ತಿರಲಿಲ್ಲ. ಆ ಅವಕಾಶವಿದ್ದರೂ ಮಾಡಿಲ್ಲ. ಯಾಕೆ ಮಾಡಿಲ್ಲ ಎಂಬುದು ಗೊತ್ತಿಲ್ಲ. ನಾಯಕತ್ವದ ಗುಣಗಳಿಲ್ಲದ ಕಾರಣ ಆಡಳಿತ ವಿಫಲವಾಗಿದೆ ಎಂದು ಪರಮೇಶ್ವರ್ ಟೀಕಿಸಿದರು.