ತುಮಕೂರು:ಲಾರಿ ಹಾಗೂ ಕ್ಯಾಂಟರ್ ಮಧ್ಯೆ ಅಪಘಾತ ನಡೆದು ಕ್ಯಾಂಟರ್ನಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತರನ್ನು ಚಿತ್ರದುರ್ಗ ಜಿಲ್ಲೆ ಮೊಳಕಾನ್ಮೂರು ತಾಲೂಕು ಬೆಲ್ಲದಾರಹಟ್ಟಿಯ ಗ್ರಾಮ ಪಂಚಾಯತ್ ಸದಸ್ಯ ಮುನಿಸ್ವಾಮಿ (52) ಹಾಗೂ ಕ್ಯಾಂಟರ್ ಚಾಲಕ ರಾಕೇಶ್ (35) ಎಂದು ಗುರುತಿಸಲಾಗಿದೆ. ಶನಿವಾರ ಬೆಳಿಗ್ಗೆ ನಗರದ ಹೊರವಲಯದ ಊರುಕೆರೆ ಸಮೀಪ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದುರ್ಘಟನೆ ನಡೆಯಿತು.
ಮುನಿಸ್ವಾಮಿ ತಮ್ಮ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿಯನ್ನು ಬೆಂಗಳೂರಿನ ಮಾರುಕಟ್ಟೆ ತೆಗೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕ್ಯಾಂಟರ್ ಮುಂಭಾಗ ನಜ್ಜುಗುಜ್ಜಾಗಿದೆ. ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ವಿಜಯಪುರ: ಚಿಕಿತ್ಸೆಗೆ ಕರೆದೊಯ್ಯುವಾಗ ಆಂಬ್ಯುಲೆನ್ಸ್ ಅಪಘಾತ; ಶಿಶು ಸಹಿತ ಗರ್ಭಿಣಿ ಸಾವು
ಇತ್ತೀಚಿನ ಪ್ರಕರಣಗಳು- ನಿಂತಿದ್ದ ಟ್ರ್ಯಾಕ್ಟರ್ಗೆ ಆಂಬ್ಯುಲೆನ್ಸ್ ಡಿಕ್ಕಿ: ವಿಜಯಪುರದಲ್ಲಿ ಗರ್ಭಿಣಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ ನಿಂತಿದ್ದ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದು ಗರ್ಭದಲ್ಲಿದ್ದ ಶಿಶುಸಹಿತ ಗರ್ಭಿಣಿ ಸಾವನ್ನಪ್ಪಿರುವ ಘಟನೆ 9/12/23 (ಶನಿವಾರ) ನಡೆದಿತ್ತು. ಗರ್ಭಿಣಿಗೆ ಶುಕ್ರವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲೆಯ ತಾಳಿಕೋಟೆ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಹದಗೆಟ್ಟಿದ್ದರಿಂದ ಅಲ್ಲಿಂದ ಉತ್ತಮ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಬೇಕಾಗಿತ್ತು. ಹೀಗಾಗಿ ಆಂಬ್ಯುಲೆನ್ಸ್ನಲ್ಲಿ ಕರೆದೊಯ್ಯುವಾಗ ಹೂವಿನ ಹಿಪ್ಪರಗಿ ಬಳಿ ನಿಂತಿದ್ದ ಟ್ರ್ಯಾಕ್ಟರ್ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ತಾಯಿ ಮತ್ತು ಗರ್ಭದಲ್ಲಿನ ಶಿಶು ಸಾವನ್ನಪ್ಪಿದ್ದು, ಚಾಲಕ ಸಿಬ್ಬಂದಿ ಗಾಯಗೊಂಡಿದ್ದಾರೆ.
ಟಾಟಾ ಏಸ್ ವಾಹನ ಪಲ್ಟಿ:ಮೈಸೂರಲ್ಲಿ 8/12/23(ಶುಕ್ರವಾರ)ರಂದು ಟಾಟಾ ಏಸ್ ವಾಹನ ಪಲ್ಟಿಯಾಗಿ ಶಾಲಾ ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು. ನಂಜನಗೂಡು ತಾಲೂಕಿನ ಬಳ್ಳೂರು ಹುಂಡಿ, ನಾಗಣಪುರ ಕಾಲೋನಿಯ ಮಾರ್ಗವಾಗಿ ಮಕ್ಕಳನ್ನು ಟಾಟಾಏಸ್ ವಾಹನ ಕರೆದೊಯ್ಯುತ್ತಿತ್ತು. ಚಾಲಕನ ಅಜಾಗರೂಕತೆ ಚಾಲನೆಯಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಿಂದ ವಾಹನದಲ್ಲಿದ್ದ 9 ವಿದ್ಯಾರ್ಥಿನಿಯರಲ್ಲದೆ, ಇಬ್ಬರಿಗೆ ಗಂಭೀರ ಗಾಯಗಳಾಗಿದೆ. ತಕ್ಷಣವೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಮೈಸೂರಿನ ಕೆ.ಆರ್.ಆಸ್ಪತ್ರೆ ತುರ್ತು ಚಿಕಿತ್ಸಾ ಘಟಕಕ್ಕೆ ರವಾನಿಸಿ ದಾಖಲಿಸಲಾಗಿದೆ. ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.