ತುಮಕೂರು :ನಗರದ ಪ್ರಮುಖ ಜಲಮೂಲಗಳಲ್ಲಿ ಒಂದಾಗಿರುವಂತಹ ಅಮಾನಿಕೆರೆಯಲ್ಲಿ ಪಕ್ಷಿಗಳಿಗೂ ಉತ್ತಮ ವಾತಾವರಣ ನಿರ್ಮಿಸಿಕೊಡಲು ನಿರ್ಧರಿಸಲಾಗಿದೆ. ಸ್ವಚ್ಛಂದವಾಗಿ ಪಕ್ಷಿಗಳ ತಾಣವಾಗಿಸಲು ಅಮಾನಿಕೆರೆಯಲ್ಲಿ ಎರಡು ದ್ವೀಪಗಳು ತಲೆಯೆತ್ತಲಿವೆ.
ತುಮಕೂರಿನ ಅಮಾನಿಕೆರೆಯಲ್ಲಿ ಪಕ್ಷಿಗಳಿಗಾಗಿಯೇ ತಲೆಎತ್ತಲಿವೆ ದ್ವೀಪಗಳು.. ಈಗಾಗಲೇ ಸ್ಮಾರ್ಟ್ ಸಿಟಿ ವತಿಯಿಂದ ಅಮಾನಿಕೆರೆ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗಿದೆ. ಈ ಕೆರೆಯಲ್ಲಿ 2 ದ್ವೀಪಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಅಭಿವೃದ್ಧಿಪಡಿಸಲಾಗುವ ದ್ವೀಪಗಳಲ್ಲಿ ಸಸಿಗಳನ್ನು ನೆಟ್ಟು ಮರಗಿಡಗಳನ್ನು ಬೆಳಸಲಾಗುವುದು.
ಈ ದ್ವೀಪಗಳಲ್ಲಿ ಪಕ್ಷಿಗಳಿಗೆ ಮಾತ್ರ ಸ್ವಚ್ಛಂದವಾಗಿ ಬದುಕಲು ಅವಕಾಶ ಮಾಡಿಕೊಡಲಾಗುವುದು. ಸಸಿಗಳನ್ನು ವ್ಯವಸ್ಥಿತವಾಗಿ ನೆಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪಕ್ಷಿತಜ್ಞರೊಂದಿಗೆ ಚರ್ಚಿಸಲಾಗಿದೆ. ಸಸಿಗಳನ್ನು ನೆಟ್ಟ ನಂತರ ಅವುಗಳನ್ನು ಸಂರಕ್ಷಿಸುವ ಕುರಿತಂತೆ ಕೂಡ ಯೋಜನೆ ರೂಪಿಸಲಾಗಿದೆ.
ಈ ಮೂಲಕ ಪ್ರಾಣಿ-ಪಕ್ಷಿಗಳು ಅಮಾನಿಕೆರೆ ಒಳಗೆ ಸ್ವಚ್ಛಂದವಾಗಿ ಹಾರಾಡಲು ಮತ್ತು ವಾಸಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡ ಇದಕ್ಕೆ ಸ್ವಯಂ ಪ್ರೇರಿತರಾಗಿ ಸಹಕಾರ ನೀಡುವುದು ಅಗತ್ಯವಾಗಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ತುಮಕೂರಿನ ಅಮಾನಿಕೆರೆ ಅಪಾರ ಸಂಖ್ಯೆಯ ಪಕ್ಷಿಗಳ ತಾಣವಾಗಿ ರೂಪಾಂತರಗೊಳ್ಳುವ ತಯಾರಿ ನಡೆಸಿದೆ.