ತುಮಕೂರು : ಹೇಮಾವತಿ ನಾಲೆಯಲ್ಲಿ ಕಾಲು ಜಾರಿ ಬಿದ್ದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ನಡೆದಿದೆ. ಮಹಮ್ಮದ್ ನಯೀಮ್ (7) ಮಿಸ್ಬಾಬಾನು(9) ಅಸುನೀಗಿರುವ ದುರ್ದೈವಿಗಳು. ಒಟ್ಟು ಮೂವರು ಮಕ್ಕಳು ನಾಲೆಗೆ ಕಾಲುಜಾರಿ ಬಿದ್ದಿದ್ದು, ಮೂವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿರುವ ಬಾಲಕನಾಗಿದ್ದಾನೆ.
ಇನ್ನು ಮಾಹಿತಿ ಸ್ಥಳಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿಯಿಂದ ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಿಸ್ಬಾಬಾನು ಎಂಬ ಬಾಲಕಿಯ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. ಮೂವರು ಮಕ್ಕಳು ನಾಲೆಗೆ ಬಿದ್ದಿದ್ದಿನ್ನು ಗಮನಿಸಿದ ಸ್ಥಳೀಯ ಯುವಕ, ಮಹ್ಮದ್ ಬಿಲಾಲ್ ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾನೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಕ್ಕಳನ್ನು ರಕ್ಷಿಸಿ ತಾಯಿ ಸಾವು :ಕೆರೆಯಲ್ಲಿ ಮುಳುಗುತ್ತಿದ್ದ ತನ್ನ ಇಬ್ಬರು ಮಕ್ಕಳನ್ನು ಬದುಕಿಸಿ ತಾಯಿಯೊಬ್ಬಳು ಈಜು ಬಾರದೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಜುಲೈ 2 ರಂದು ಭಾನುವಾರ ನಡೆದಿತ್ತು. ಮನು (30) ಮೃತಪಟ್ಟ ಮಹಿಳೆ. ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದರು. ದಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಕೆರೆಗೆ ಜಾರಿ ಬಿದ್ದಿದ್ದರು. ಇದನ್ನು ಕಂಡ ತಾಯಿ ಕೆರೆಗೆ ಹಾರಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಿದ್ದರು. ಆದರೆ ಈಜು ಬರದೇ ಅವರು ಸಾವನ್ನಪ್ಪಿದ್ದರು. ಈ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.