ತುಮಕೂರು :ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರೌಡಿಶೀಟರ್ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ರೌಡಿಶೀಟರ್ನನ್ನು ಮನೋಜ್ ಎಂದು ಗುರುತಿಸಲಾಗಿದೆ.
ತುಮಕೂರು ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿರುವ ಮನೋಜ್ ಅಲಿಯಾಸ್ ಮಂಡೇಲಾ ಮೇಲೆ ಹಟ್ಟಿ ಮಂಜ ಕೊಲೆ ಸೇರಿ, ಕೊಲೆ ಯತ್ನ, ದರೋಡೆ ಪ್ರಕರಣಗಳು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. ಈ ಹಿಂದೆ ನಗರದಲ್ಲಿ ನಡೆದ ಪೋಲಾಡ್ ಹತ್ಯೆ ಆರೋಪಿ ಶಿವಪ್ರಸಾದ್ ಸ್ನೇಹಿತನಾಗಿದ್ದ ಬಂಡೆ ನಾಗನ ಕೊಲೆಗೆ ಮನೋಜ್ ಹೊಂಚು ಹಾಕಿ ಕೊಲೆಗೆ ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ತುಮಕೂರು ನಗರದ ಹೊರವಲಯದ ಚಿಕ್ಕೋಡಿ ಬಳಿ ತಲೆಮರೆಸಿಕೊಂಡಿದ್ದ ಮನೋಜ್ನನ್ನು ಬಂಧಿಸಲು ಶನಿವಾರ ರಾತ್ರಿ ಪೊಲೀಸರು ಮುಂದಾಗಿದ್ದರು. ಈ ವೇಳೆ ಆರೋಪಿ ಏಕಾಏಕಿ ಚಾಕುವಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಪರಿಣಾಮ ಹೆಡ್ ಕಾನ್ಸ್ಟೇಬಲ್ ಮಹಮದ್ ನಯಾಜ್ ಹಾಗೂ ಎಎಸ್ಐ ಮಲ್ಲೇಶ್ ಅವರಿಗೆ ಗಾಯಗಳಾಗಿವೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಎರಡು ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.
ಆದರೂ ಶರಣಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ ತುಮಕೂರು ನಗರ ಠಾಣೆಯ ಇನ್ಸ್ಪೆಕ್ಟರ್ ದಿನೇಶ್ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ತಕ್ಷಣ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಬಳಿಕ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವಿ ಅವರು, ಅಧಿಕಾರಿಗಳಿಂದ ಮಾಹಿತಿ ಪಡೆದು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತ್ತೊಂದೆಡೆ ಕಾರ್ಯಾಚರಣೆ ವೇಳೆ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ತುಮಕೂರು ಎಸ್ಪಿ ಅಶೋಕ್ ಕೆವಿ ಅವರು ಆರೋಪಿ ಮನೋಜ್ ಮತ್ತು ಆತನ ಸಹಚರರು ಶನಿವಾರ ಬೆಳಗ್ಗೆ ಮತ್ತೊಬ್ಬ ರೌಡಿಶೀಟರ್ ಬಂಡೆ ನಾಗ ಎಂಬುವವನ ಮೇಲೆ ಹಲ್ಲೆ ನಡೆಸಿದ್ದರು. ಬಂಡೆ ನಾಗ ನಗರ ಠಾಣೆಗೆ ಕೊಲೆ ಯತ್ನದ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಶನಿವಾರ ರಾತ್ರಿ ಡಿವೈಎಸ್ಪಿ ಚಂದ್ರಶೇಖರ್, ದಿನೇಶ್ ಕುಮಾರ್ ಹಾಗೂ ಪೊಲೀಸರ ತಂಡ ದಾಳಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಕೊಳ್ಳಲು ಯತ್ನಿಸಿದಾಗ ಆರೋಪಿ ಕಾಲಿಗೆ ಗುಂಡು ಹಾರಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ :ಬೆಂಗಳೂರು: ಮಹಿಳಾ ಐಪಿಎಸ್ ಅಧಿಕಾರಿ ಕಾರಿಗೆ ಬೈಕ್‌ನಲ್ಲಿ ಗುದ್ದಿ ನಿಂದಿಸಿದ ವ್ಯಕ್ತಿ ಸೆರೆ