ತುಮಕೂರು: ಸರ್ಕಾರ ಈಗಾಗಲೇ ಪದವಿ ಕಾಲೇಜುಗಳಲ್ಲಿ ಒಂದೆಡೆ ಭೌತಿಕ ತರಗತಿಗಳನ್ನೇನೋ ಆರಂಭಿಸಿದೆ. ಆದರೆ, ಕೊರೊನಾ ಸೋಂಕು ಕಾಲೇಜು ಕ್ಯಾಂಪಸ್ ಗಳಲ್ಲಿ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು ತೀವ್ರ ಹಿಂದೇಟು ಹಾಕುತ್ತಿರುವುದು ಬೆಳಕಿಗೆ ಬಂದಿದೆ.
ಇದಕ್ಕೆ ಸಾಕ್ಷಿಯೆಂಬಂತೆ ತುಮಕೂರು ವಿಶ್ವವಿದ್ಯಾಲಯದಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ. ಮುಖ್ಯವಾಗಿ ಪರೀಕ್ಷಾ ಶುಲ್ಕ ಕಟ್ಟಲು ನೂಕು ನುಗ್ಗಲು ಉಂಟಾಗಿತ್ತು. ಪದವಿ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ನಾಮುಂದು ತಾಮುಂದು ಎಂದು ಮುಗಿಬಿದ್ದ ಘಟನೆ ಕಂಡು ಬಂತು. ಸಾಮಾಜಿಕ ಅಂತರ, ಮಾಸ್ಕ್ ಇಲ್ಲದೇ ವಿದ್ಯಾರ್ಥಿಗಳು ಗುಂಪು ಗುಂಪಾಗಿ ಬಂದಿದ್ದು ತುಮಕೂರು ವಿವಿ ಆವರಣದಲ್ಲಿ ನಡೆದಿದೆ. ಶುಲ್ಕ ಪಾವತಿಸಲು ಒಂದೇ ಕೌಂಟರ್ ತೆರೆದಿರುವುದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲು ಮತ್ತು ಎರಡನೇ ಕೊರೊನಾ ಅಲೆಯ ವೇಳೆ ತುಮಕೂರು ವಿವಿಯ ಆವರಣಕ್ಕೆ ಆರ್ಟಿಪಿಸಿಆರ್ ಟೆಸ್ಟ್ ವರದಿ ಇಲ್ಲದೆ ಬರಲು ಅವಕಾಶ ಇರಲಿಲ್ಲ. ಆದರೆ ಪ್ರಸ್ತುತ ಸಂಭಾವ್ಯ 3ನೇ ಅಲೆ ಇದ್ರೂ ತುಮಕೂರು ವಿವಿ ಮಾತ್ರ ಕ್ಯಾರೇ ಎನ್ನುತ್ತಿಲ್ಲ. ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಅರಿವು ಮೂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ಕೊರೊನಾಗೆ ಕ್ಯಾರೆ ಎನ್ನದೇ ಶುಲ್ಕ ಕಟ್ಟಲು ವಿದ್ಯಾರ್ಥಿಗಳ ನೂಕು ನುಗ್ಗಲು ಈಗಾಗಲೇ ಜಿಲ್ಲಾದ್ಯಂತ ಕೋವಿಡ್ ನಿಯಂತ್ರಣಕ್ಕೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಾತ್ರೆ, ದೇವಸ್ಥಾನಗಳಲ್ಲಿ ಜನ ಗುಂಪು ಗೂಡಬಾರದೆಂದು ಸೂಚಿಸಿದ್ದಾರೆ. ಹೀಗಿದ್ದರೂ ತುಮಕೂರು ನಗರದಲ್ಲಿಯೇ ಇರೋ ತುಮಕೂರು ವಿಶ್ವ ವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಪೂರಕ ವ್ಯವಸ್ಥೆ ಇಲ್ಲದೇ ಗುಂಪು ಗೂಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತಂತೆ ಸ್ಪಷ್ಟನೆ ನೀಡಿರುವ ತುಮಕೂರು ವಿವಿ ಉಪಕುಲಪತಿ ಸಿದ್ದೇಗೌಡ, ತುಮಕೂರು ವಿವಿ ಕ್ಯಾಂಪಸ್ನಲ್ಲಿರುವ ಕಲಾ - ವಿಜ್ಞಾನ ವಿಭಾಗದಲ್ಲಿ ಶುಲ್ಕ ಕಟ್ಟಲು ನೂಕುನುಗ್ಗಲು ವಿಚಾರ ಗಮನಕ್ಕೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಭೇಟಿನೀಡಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಯಿತು. ತುಮಕೂರು ವಿವಿ ಸರ್ಕಾರದ ಕೋವಿಡ್ ನಿಯಾಮಾವಳಿಗಳನ್ನು ಪಾಲಿಸಿಕೊಂಡು ಬಂದಿದೆ. ಈಗಾಗಲೇ ಕಾರಣ ಕೇಳಿ ಪ್ರಾಂಶುಪಾಲರಿಗೆ ನೋಟಿಸ್ ನೀಡಿದ್ದೇವೆ ಎಂದಿದ್ದಾರೆ.
ವಿದ್ಯಾರ್ಥಿಗಳು ಗುಂಪು ಸೇರುವಂತಿಲ್ಲ, ತರಗತಿವಾರು ಫೀಸ್ ಕಟ್ಟಲು 15 ದಿನ ಅನುವು ಮಾಡಿಕೊಟ್ಟಿದ್ದೇವೆ. ಇನ್ಮುಂದೆ ಈ ರೀತಿ ನಡೆಯದಂತೆ ಎಚ್ಚರಿಕೆ ನೀಡಿದ್ದೇವೆ. ಅಲ್ಲದೆ ಶುಲ್ಕ ಪಾವತಿಸುವ ಅವಧಿಯನ್ನೂ ವಿಸ್ತರಣೆ ಮಾಡಲಾಗುವುದು ಎಂದಿದ್ದಾರೆ.