ತುಮಕೂರು :ಇಂದು ನಡೆದ ತುಮಕೂರು ವಿಶ್ವವಿದ್ಯಾನಿಲಯದ 13ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ 94 ಅಭ್ಯರ್ಥಿಗಳಿಗೆ ಪಿಹೆಚ್ಡಿ ಪದವಿ ಪ್ರದಾನ ಹಾಗೂ ಅತಿ ಹೆಚ್ಚು ಅಂಕ ಪಡೆದ ಸ್ನಾತಕೋತ್ತರ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಲಾಯಿತು.
ವಿಶ್ವವಿದ್ಯಾನಿಲಯದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ಪ್ರದಾನ ಮಾಡಿದರು. ಇದಕ್ಕೂ ಮುನ್ನ ಹಾಲು ಉತ್ಪಾದನಾ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಡಾ. ಸಿ ಎನ್ ಮಂಚೇಗೌಡ ಅವರಿಗೆ ರಾಜ್ಯಪಾಲರು ಡಿ.ಲಿಟ್ ಪದವಿ ನೀಡಿ ಸನ್ಮಾನಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ವೈ ಎಸ್ ಸಿದ್ದೇಗೌಡ ಅವರು ಮಾತನಾಡಿ, ವಿಶ್ವವಿದ್ಯಾನಿಲಯದ ಕಾರ್ಯಚಟುವಟಿಕೆ, ವಿಶ್ವವಿದ್ಯಾನಿಲಯದ ಮಹತ್ವ, ಶೈಕ್ಷಣಿಕ ವಿಚಾರ, ವಿಶ್ವವಿದ್ಯಾನಿಲಯದಲ್ಲಿರುವ ಕೋರ್ಸ್ಗಳು ಮತ್ತು ಅವುಗಳ ಸೌಲಭ್ಯ,ಆಡಳಿತ ನಿರ್ವಹಣೆ ಬಗ್ಗೆ ಸುದೀರ್ಘ ವರದಿ ಒಪ್ಪಿಸಿದರು.
ವಿಕಲಚೇತನ ಮಂಜುಳಾ ಎಂಎಸ್ಡಬ್ಲ್ಯೂನಲ್ಲಿ ಹೆಚ್ಚಿನ ಅಂಕಗಳಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಸರ್ಕಾರದಿಂದ ದೊರೆಯುವಂತಹ ಯಾವುದಾದರೂ ಕೆಲಸ ದೊರೆತರೆ ಮಾಡಲು ಸಿದ್ದಳಾಗಿದ್ದೇನೆ. ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಒಂದನ್ನು ರಚಿಸಿಕೊಂಡಿದ್ದೇನೆ. ಈ ಟ್ರಸ್ಟ್‌ಗೆ ಸರ್ಕಾರದಿಂದ ಹಣ ದೊರೆತರೆ ಸಮಾಜಮುಖಿ ಕಾರ್ಯಗಳನ್ನು ಮಾಡಲಿದ್ದೇನೆ ಎಂದರು.
ಗಣಿತಶಾಸ್ತ್ರದಲ್ಲಿ 5 ಚಿನ್ನದ ಪದಕ ಪಡೆದ ಎಸ್.ಹೆಚ್ ಮನೋಹರ್ ಮಾತನಾಡಿ, ಪ್ರೌಢಶಾಲೆಯಲ್ಲಿ ಓದುತ್ತಿರುವಾಗಿನಿಂದಲೂ ಗಣಿತದ ವಿಷಯದಲ್ಲಿ ಆಸಕ್ತಿ ಹೆಚ್ಚಾಗಿತ್ತು. ಹಾಗಾಗಿ ಅಂದಿನಿಂದಲೂ ಗಣಿತದ ಬಗ್ಗೆ ಹೆಚ್ಚು ಆಸಕ್ತಿಯಿಂದ ಕಲಿಯುತ್ತಾ ಬಂದೆ. ಮುಂದಿನ ದಿನಗಳಲ್ಲಿ ಗಣಿತ ವಿಷಯದಲ್ಲಿ ಪ್ರೊಫೆಸರ್ ಆಗುವ ಆಸೆ ಹೊಂದಿದ್ದೇನೆ ಎಂದರು.