ತುಮಕೂರು: ಕಲ್ಪತರು ನಾಡು ಬಹಳ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಎಲ್ಲಾ ವಿಚಾರಗಳಲ್ಲೂ ರಾಜ್ಯ ರಾಜಧಾನಿಗೆ ತುಮಕೂರು ಪರ್ಯಾಯ ನಗರ. ಹೀಗಾಗಿಯೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆಗೆ ತುಮಕೂರು ನಗರ ಆಯ್ಕೆಯಾಗಿತ್ತು. ನಗರವನ್ನು ಬೆಳೆಸುವುದರ ಜೊತೆಗೆ, ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿತ್ತು.
ಆದರೆ ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಅಧಿಕಾರಿಗಳ ಉಡಾಫೆಯಿಂದಾಗಿ ಈ ಅನುದಾನ ಬೇಕಾಬಿಟ್ಟಿಯಾಗಿ ಪೋಲಾಗುತ್ತಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಶೌಚಾಲಯಗಳು ಸರಿಯಾಗಿ ಒಂದು ವರ್ಷವೂ ಬಳಕೆಗೆ ಬಾರದಿರುವುದು ಯೋಜನೆ ಹಳ್ಳ ಹಿಡಿದಿರುವುದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಸಾರ್ವಜನಿಕರ ತೆರಿಗೆ ಹಣವನ್ನು ಮನ ಬಂದಂತೆ ಪೋಲು ಮಾಡುತ್ತಿದೆಯಾ? ಎಂಬ ಅನುಮಾನ ಕಾಡುತ್ತಿದೆ.
ನಗರವನ್ನು ಹೈ-ಫೈ ಸಿಟಿ ಮಾಡುತ್ತೇವೆ ಎನ್ನುತ್ತಲೇ ಮೂರ್ನಾಲ್ಕು ಕಡೆಗಳಲ್ಲಿ ಅತ್ಯಾಧುನಿಕ ಶೌಚಾಲಯಗಳನ್ನು ನಿರ್ಮಿಸಲು ಸುಮಾರು 45 ಲಕ್ಷಕ್ಕೂ ಹೆಚ್ಚು ಹಣವನ್ನು ವ್ಯಯಿಸಿತ್ತು. ನಾಲ್ಕು ವರ್ಷಗಳ ಹಿಂದೆ ನಿರ್ಮಾಣಗೊಂಡ ಈ ಶೌಚಾಲಯಗಳು ಕಳೆದ ಮೂರು ವರ್ಷಗಳಿಂದ ಹಾಳುಬಿದ್ದಿವೆ. ಸಾರ್ವಜನಿಕರ ಬಳಕೆಗೆ ಬಾರದೇ ತುಕ್ಕು ಹಿಡಿಯುತ್ತಿವೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿದಂತಿಲ್ಲ.