ತುಮಕೂರು: ಮದುವೆ ಛತ್ರಗಳಲ್ಲಿ ಸ್ವಚ್ಛತೆ ಹಾಗೂ ಇತರೆ ಕೆಲಸ ಮಾಡುವ ಸಿಬ್ಬಂದಿಗೆ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಸ್ಮಾರ್ಟ್ ಕಾರ್ಡ್ ನೀಡಬೇಕು ಹಾಗೂ ಸೂಕ್ತ ಪರಿಹಾರ ಘೋಷಣೆ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮೌನ ಪ್ರತಿಭಟನೆ ನಡೆಸಲಾಯಿತು.
ಮದುವೆ ಛತ್ರ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಮನವಿ - ತುಮಕೂರು ಮೌನ ಪ್ರತಿಭಟನೆ
ಮದುವೆ ಛತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಒತ್ತಾಯಿಸಿ ಶ್ರೀ ರಾಜೇಶ್ವರಿ ಸ್ತ್ರೀಶಕ್ತಿ ಮಹಿಳಾ ಅಭಿವೃದ್ಧಿ ಸಂಘದಿಂದ ಎಸಿ ಅಜಯ್ ಅವರಿಗೆ ಮನವಿ ಸಲ್ಲಿಸಲಾಯಿತು.

ಕೋವಿಡ್-19 ಹಿನ್ನೆಲೆಯಲ್ಲಿ ಮದುವೆ ಛತ್ರಗಳಲ್ಲಿ ಕಾರ್ಯ ನಿರ್ವಹಿಸುವವರು ಕಳೆದ ಆರು ತಿಂಗಳಿಂದ ಯಾವುದೇ ಕೆಲಸವಿಲ್ಲದೆ ನಿರುದ್ಯೋಗಿಗಳಾಗಿದ್ದು, ತಮ್ಮ ಕುಟುಂಬ ನಿರ್ವಹಣೆಗೆ ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಹಾಗಾಗಿ ರಾಜ್ಯ ಸರ್ಕಾರ ಕಾರ್ಮಿಕರ ನೆರವಿಗೆ ಕೂಡಲೇ ಧಾವಿಸಿ ಪರಿಹಾರ ನೀಡಬೇಕು. ಅಲ್ಲದೇ ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೀಡುತ್ತಿರುವ ಸ್ಮಾರ್ಟ್ ಕಾರ್ಡ್ ಯೋಜನೆಗೆ ಛತ್ರಗಳಲ್ಲಿ ಸ್ವಚ್ಛತಾ ಕೆಲಸ ಮಾಡುವವರನ್ನು ಒಳಪಡಿಸುವಂತೆ ಒತ್ತಾಯಿಸಿದರು.
ಮದುವೆ ಛತ್ರಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದು, ಅನಾರೋಗ್ಯದ ಸಂದರ್ಭದಲ್ಲಿ ಚಿಕಿತ್ಸಾ ವೆಚ್ಚ ಭರಿಸುವುದು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಪಿಂಚಣಿ ನೀಡುವ ಯೋಜನೆಗಳನ್ನು ರೂಪಿಸುವಂತೆ ಒತ್ತಾಯಿಸಿ ಶ್ರೀ ರಾಜೇಶ್ವರಿ ಸ್ತ್ರೀಶಕ್ತಿ ಮಹಿಳಾ ಅಭಿವೃದ್ಧಿ ಸಂಘದಿಂದ ಎಸಿ ಅಜಯ್ ಅವರಿಗೆ ಮನವಿ ಸಲ್ಲಿಸಲಾಯಿತು.