ತುಮಕೂರು: ಲಾಕ್ಡೌನ್ ಹಿನ್ನೆಲೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ತೆರಿಗೆ ಪಾವತಿ ಮೇಲಿನ ಶೇ.5 ರ ರಿಯಾಯಿತಿ ಕಾಲಾವಧಿಯನ್ನು ಮೇ 31 ರಿಂದ ಜುಲೈ 31 ರ ವರೆಗೆ ವಿಸ್ತರಿಸಲಾಗಿದೆಯೆಂದು ಮೇಯರ್ ಫರೀದಾ ಬೇಗಂ ತಿಳಿಸಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ವೈಯಕ್ತಿಕ ಆದಾಯವಿಲ್ಲದೆ ಸಂಕಷ್ಟದಲ್ಲಿರುವವರು ನಿಗದಿತ ಅವಧಿಯೊಳಗೆ ಆಸ್ತಿ ತೆರಿಗೆ ಪಾವತಿಸಲು ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಕಾಲಾವಧಿಯನ್ನು ವಿಸ್ತರಣೆ ಮಾಡಲಾಗಿದೆ. ಆಸ್ತಿ ತೆರಿಗೆ ಪಾವತಿಗೆ ಕಾಲಾವಕಾಶ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದ ಹಿನ್ನೆಲೆ ತೆರಿಗೆ ಪಾವತಿಗೆ 2 ತಿಂಗಳ ಕಾಲಾವಕಾಶ ದೊರೆತಿದೆ. ನಾಗರಿಕರು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂದು ಮೇಯರ್ ಫರೀದಾ ಬೇಗಂ ಹೇಳಿದ್ದಾರೆ.
ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಏರಿಸುವಂತೆ ಸರ್ಕಾರದ ಆದೇಶವಿದ್ದು, ಈ ಆದೇಶದನ್ವಯ ಪ್ರಸಕ್ತ ವರ್ಷ ಶೇ.15 ರಷ್ಟು ಆಸ್ತಿ ತೆರಿಗೆಯನ್ನು ಏರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿಯೇ ಕೊರೊನಾ ಸೋಂಕು ಹರಡಿರುವುದು ನಮ್ಮ ದುರಾದೃಷ್ಟ. ಪ್ರಸಕ್ತ ವರ್ಷ ವಿಧಿಸುವ ಶೇ.15 ರಷ್ಟು ತೆರಿಗೆ ಏರಿಕೆಯನ್ನು ಕೈ ಬಿಡಬೇಕೆಂದು ಪಾಲಿಕೆಯ ಎಲ್ಲಾ ಸದಸ್ಯರು ಮನವಿ ಮಾಡಿರುವ ಹಿನ್ನೆಲೆ ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಮಾಹಿತ ನೀಡಿದ್ದಾರೆ.
ರಾಜ್ಯದಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ದ್ವಿಗುಣವಾಗುತ್ತಿರುವುದರಿಂದ ಪಾಲಿಕೆಯಿಂದ ನಗರದಾದ್ಯಂತ ಸ್ಯಾನಿಟೈಸಿಂಗ್ ಮಾಡುವುದರೊಂದಿಗೆ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಸಹ ಸರ್ಕಾರ ಲಾಕ್ಡೌನ್ನ್ನು ಸಡಿಲಿಕೆಗೊಳಿಸಿದೆಯೆಂದು ಅನಾವಶ್ಯಕವಾಗಿ ತಿರುಗಾಡದೆ ಸ್ವಯಂ ಹೊಣೆಗಾರಿಕೆಯಿಂದ ತಮಗೆ ತಾವೇ ಕೆಲವು ನಿಯಂತ್ರಣಾ ಕ್ರಮಗಳನ್ನು ಅನುಸರಿಸುವುದರಿಂದ ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.