ತುಮಕೂರು:ಜಿಲ್ಲಾ ಪೊಲೀಸ್ ವತಿಯಿಂದ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳನ್ನು ನಿಯಂತ್ರಿಸಲು ‘ತುಮಕೂರು ಇ ಸುಬಾಹು’ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ತಿಳಿಸಿದ್ದಾರೆ.
ಮೊದಲಿಗೆ ತಿಪಟೂರು ಉಪವಿಭಾಗದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ತುಮಕೂರು ನಗರದ ಎಲ್ಲ ಚೆಕ್ ಪೋಸ್ಟ್ ಹಾಗೂ ರಾಷ್ಟ್ರೀಯ ಹೆದ್ದಾರಿ ಚೆಕ್ ಪೋಸ್ಟ್ಗಳಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು.
ಚೆಕ್ ಪೋಸ್ಟ್ಗಳಲ್ಲಿನ ಪೊಲೀಸ್ ಸಿಬ್ಬಂದಿ ಈ ಆ್ಯಪ್ ಡೌನ್ಲೋಡ್ ಮಾಡಿಕೊಂಡು, ಅನಗತ್ಯವಾಗಿ ಓಡಾಡುವ ವಾಹನಗಳ ಮಾಹಿತಿ ಕಲೆಹಾಕುವರು. ಈ ಅಪ್ಲಿಕೇಷನ್ ಕಳೆದ ಎರಡು ವರ್ಷದಿಂದ ಬಳಸಲಾಗುತ್ತಿದೆ. ಈಗ ಹೆಚ್ಚಿನ ತಂತ್ರಜ್ಞಾನ ಬಳಸಿಕೊಂಡು ವಾಹನಗಳ ಮಾಲೀಕರು ಯಾವ ಕಾರಣಕ್ಕೆ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಆ್ಯಪ್ನಲ್ಲಿ ದಾಖಲಿಸುತ್ತಾರೆ ಎಂದರು.
ನಿತ್ಯ ವಾಹನಗಳ ದಾಖಲೆ ಪರಿಶೀಲಿಸುವುದರ ಜೊತೆಗೆ ಅನವಶ್ಯಕವಾಗಿ ಓಡಾಡುತ್ತಿರುವ ವಾಹನಗಳ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.