ಒಂದೇ ದಿನ ಪ್ರಚಾರಕ್ಕಿಳಿದ ಮಾಜಿ ಶಾಸಕ ಸೊಗಡು ಶಿವಣ್ಣ , ಹಾಲಿ ಜ್ಯೋತಿ ಗಣೇಶ್ ತುಮಕೂರು: ಭಾರತೀಯ ಜನತಾ ಪಕ್ಷದಲ್ಲಿ ತುಮಕೂರು ನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ಗಾಗಿ ತೀವ್ರ ಪೈಪೋಟಿ ಶುರುವಾಗಿದೆ. ಹಾಲಿ ಶಾಸಕ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಟಿಕೆಟ್ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದು, ಇವರಿಬ್ಬರ ಪೈಪೋಟಿಯಿಂದ ತುಮಕೂರು ನಗರ ಬಿಜೆಪಿಯಲ್ಲಿ ಗೊಂದಲ ಶುರುವಾಗಿದೆ.
ಮೊನ್ನೆ ಜಿದ್ದಿಗೆ ಬಿದ್ದವರಂತೆ ಯಡಿಯೂರಪ್ಪ ಹುಟ್ಟುಹಬ್ಬವನ್ನೂ ಕೇವಲ ನೂರು ಮೀಟರ್ ಅಂತರದಲ್ಲೇ ಇಬ್ಬರು ನಾಯಕರು ಪ್ರತ್ಯೇಕ ಎರಡು ಕಡೆ ನಡೆಸಿದ್ದು, ಸುದ್ದಿಯಾಗಿದ್ರು. ಈಗ ಒಂದೇ ದಿನ, ಒಂದೇ ಸ್ಥಳದಿಂದ ಪ್ರಚಾರವನ್ನು ಆರಂಭಿಸುವ ಮೂಲಕ ತಮ್ಮೊಳಗಿನ ಭಿನ್ನಮತ ಎಷ್ಟರ ಮಟ್ಟಿಗೆ ಇದೆ ಅನ್ನೋದನ್ನು ಬಹಿರಂಗಪಡಿಸಿದ್ದಾರೆ.
ಹೈಕಮಾಂಡ್ಗೆ ತಲೆನೋವು: ಒಂದೇ ದಿನ ಪ್ರಚಾರ ಆರಂಭಿಸಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಉಭಯ ನಾಯಕರು. ತುಮಕೂರು ನಗರದಲ್ಲಿ ಬಿಜೆಪಿ ಭಿನ್ನಮತ ದಿನೇ ದಿನೇ ಭುಗಿಲೇಳುತ್ತಿದೆ. ಹಾಲಿ ಶಾಸಕ ಜ್ಯೋತಿ ಗಣೇಶ್ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ನಡುವಿನ ಟಿಕೆಟ್ ಪೈಪೋಟಿ ತಾರಕಕ್ಕೇರಿದೆ. ಹೈ ಕಮಾಂಡ್ಗೆ ಈ ಕ್ಷೇತ್ರದ ಟಿಕೆಟ್ ಹಂಚಿಕೆ ತಲೆನೋವಾಗಿ ಪರಿಣಮಿಸಿದೆ.
ಹಾಲಿ - ಮಾಜಿ ನಡುವಿನ ತಿಕ್ಕಾಟದಿಂದ ಬಿಜೆಪಿಗೆ ಇಕ್ಕಟ್ಟು?: ತುಮಕೂರು ನಗರ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆ ಎಂದರೆ ತಪ್ಪಾಗಲಾರದು. ಯಾಕಂದ್ರೆ ಕಳೆದ 30 ವರ್ಷದ ಇತಿಹಾಸದಲ್ಲಿ ಒಂದು ಅವಧಿಗೆ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಾಗಿದ್ದು ಬಿಟ್ರೆ ಉಳಿದ ಎಲ್ಲಾ ಚುನಾವಣೆಗಳಲ್ಲಿಯೂ ತುಮಕೂರಿನ ಮತದಾರರು ಬಿಜೆಪಿ ಅಭ್ಯರ್ಥಿಯ ಕೈ ಹಿಡಿದಿದ್ದಾರೆ. ತುಮಕೂರು ನಗರ ಕ್ಷೇತ್ರ ಈಗಲೂ ಬಿಜೆಪಿ ತೆಕ್ಕೆಯಲ್ಲಿದ್ದು, ಮುಂದಿನ ಚುನಾವಣೆಯಲ್ಲಿಯೂ ಈ ಕ್ಷೇತ್ರವನ್ನು ಗೆಲ್ಲೋದಕ್ಕೆ ಕಸರತ್ತು ನಡೆಸುತ್ತಿದೆ. ಆದ್ರೆ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ತಿಕ್ಕಾಟ ಬಿಜೆಪಿ ಆಸೆಗೆ ತಣ್ಣೀರೆರಚುವಂತೆ ಕಾಣಿಸ್ತಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಬಿಎಸ್ವೈ ಬರ್ತಡೇ ಬೇರೆ ಬೇರೆ ಆಯೋಜನೆ: ಮೊನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹುಟ್ಟುಹಬ್ಬವನ್ನೂ ಸೊಗಡು ಶಿವಣ್ಣ ಮತ್ತು ಜ್ಯೋತಿ ಗಣೇಶ್ ಅಭಿಮಾನಿಗಳು ಪ್ರತ್ಯೇಕವಾಗಿ ಆಚರಿಸಿದ್ರು. ಕೇವಲ ನೂರು ಮೀಟರ್ ಅಂತರದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಆಯೋಜಿಸಿ ಪರಸ್ಪರ ತೊಡೆ ತಟ್ಟಿದ್ರು. ಇದೀಗ ಒಂದೇ ದಿನ, ಒಂದೇ ಸ್ಥಳದಲ್ಲಿ ಪ್ರಚಾರವನ್ನ ಆರಂಭಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸಿದ್ದಗಂಗಾ ಮಠದಿಂದ ಪ್ರಚಾರಕ್ಕೆ ಚಾಲನೆ:ಇಂದು ತುಮಕೂರು ನಗರ ಕ್ಷೇತ್ರದ ಹಾಲಿ ಶಾಸಕ ಜ್ಯೋತಿ ಗಣೇಶ್ ಅವರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು. ಅಲ್ಲದೇ ವಿಜಯಸಂಕಲ್ಪ ಅಭಿಯಾನಕ್ಕೆ ಕೂಡ ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ತುಮಕೂರು ದೇವಮೂಲೆ ದೇವರಾಯ ಪಟ್ಟಣದಿಂದ ಇಂದು ವಿಜಯ ಸಂಕಲ್ಪಯಾತ್ರೆಯನ್ನ ಆರಂಭಿಸುತ್ತೇವೆ. 25 ದಿನಗಳಲ್ಲಿ ಕ್ಷೇತ್ರದ ಎಲ್ಲಾ ವಾಡ್೯ಗಳಿಗೆ ತಲುಪುವಂತಹ ಕೆಲಸ ಮಾಡಲಿದ್ದು, ವಿಜಯ ಸಂಕಲ್ಪ ಯಾತ್ರೆ ಎಲ್ಲ ರೀತಿಯಲ್ಲೂ ಪ್ರಚಾರಕ್ಕೆ ಅನುಕೂಲವಾಗಲಿದೆ ಎಂದು ಶಾಸಕ ಜ್ಯೋತಿ ಗಣೇಶ್ ತಿಳಿಸಿದ್ದರು.
ಇನ್ನು, ಹಾಲಿ ಶಾಸಕ ಜ್ಯೋತಿ ಗಣೇಶ್ ಭೇಟಿ ನೀಡಿ ನಿರ್ಗಮಿಸುತ್ತಿದ್ದಂತೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ ಮಾಜಿ ಸಚಿವ, ಬಿಜೆಪಿ ಟಿಕೆಟ್ ಆಕಾಂಕ್ಷಿ ಸೊಗಡು ಶಿವಣ್ಣ ಕೂಡ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಬಳಿಕ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಒಳ್ಳೆಯ ಸ್ಥಳದಿಂದ ಪ್ರಚಾರವನ್ನ ಆರಂಭಿಸಬೇಕು ಎಂದು ಕಾರ್ಯಕರ್ತರು, ಭಕ್ತರು ಬಂದಿದ್ದಾರೆ. ಇಂದಿನಿಂದ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡೋದಾಗಿ ತಿಳಿಸಿದ್ರು.
ಒಟ್ಟಿನಲ್ಲಿ ಉಭಯ ನಾಯಕರ ಟಿಕೆಟ್ ಫೈಟ್ದಿಂದ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಒಡೆದ ಮನೆಯಾಗಿದೆ. ಹಾಲಿ ಶಾಸಕರು ಹಾಗೂ ಮಾಜಿ ಸಚಿವರ ನಡುವಿನ ಈ ಗುದ್ದಾಟವನ್ನ ಬಿಜೆಪಿ ಹೈ ಕಮಾಂಡ್ ಹೇಗೆ ಪರಿಹರಿಸುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.
ಇದನ್ನೂಓದಿ:ಕುಂದಗೋಳ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ..? ಟಿಕೆಟ್ ಆಕಾಂಕ್ಷಿಗಳ ಶಕ್ತಿ ಪ್ರದರ್ಶನ