ತುಮಕೂರು: ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಮುಖಂಡರ ಸಾಲು ಸಾಲು ಯಾತ್ರೆಗಳಿಂದಾಗಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಎರಡೂ ಪಕ್ಷಗಳ ಮುಖಂಡರು ಮುಖ್ಯವಾಗಿ ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿಕೊಂಡು ಸಾಕಷ್ಟು ಟೀಕೆ ಮಾಡಿರುವುದು ಇಲ್ಲಿ ಗಮನಾರ್ಹ ಅಂಶ.
ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಜಿಲ್ಲೆಯಲ್ಲಿ ನಿರಂತರವಾಗಿ ಐದು ದಿನಗಳ ಕಾಲ ತುಮಕೂರು ಕೊರಟಗೆರೆ ಮಧುಗಿರಿ ಗುಬ್ಬಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಿದೆ. ಜೆಡಿಎಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೊರತುಪಡಿಸಿ ಇನ್ಯಾವುದೇ ರಾಜ್ಯ ಮಟ್ಟದ ಮುಖಂಡರು ಯಾತ್ರೆಯಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ಆದರೆ ಸ್ಥಳೀಯ ಜೆಡಿಎಸ್ ಮುಖಂಡರು ಕುಮಾರಸ್ವಾಮಿಗೆ ಸಾಥ್ ನೀಡಿದ್ದಾರೆ. ಮುಖ್ಯವಾಗಿ ಜೆಡಿಎಸ್ ಪಕ್ಷ ಅಂಗನವಾಡಿ ಕಾರ್ಯಕರ್ತೆಯರನ್ನು, ಶ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಹಾಗೂ ಪಿಂಚಣಿ ಯೋಜನೆ, ಕುರಿತಂತೆ ಹೆಚ್ಚು ಪ್ರಸ್ತಾಪ ಮಾಡಿದ್ದು ಮತದಾರರನ್ನು ಸೆಳೆಯಲು ವಿಭಿನ್ನ ಪ್ರಯತ್ನ ನಡೆಸಿದೆ.
ಎಚ್ ಡಿ ಕುಮಾರಸ್ವಾಮಿ ಯಾತ್ರೆಯ ಮೂಲಕ ಸಾಗಿದ ಕಡೆಯಲ್ಲೆಲ್ಲಾ ಅಪಾರ ಸಂಖ್ಯೆಯಲ್ಲಿ ಜೆಡಿಎಸ್ ಕಾರ್ಯಕರ್ತರು ನೆರೆದಿರುವುದು ಸ್ಪಷ್ಟವಾಗುತ್ತಿದೆ. ಆದರೆ ಇವೆಲ್ಲವೂ ಮತಗಳಾಗಿ ಜೆಡಿಎಸ್ ಪಕ್ಷಕ್ಕೆ ಪರಿವರ್ತನೆ ಆಗುತ್ತದೆಯೋ ಎಂಬ ಅನುಮಾನ ಮೂಡಿದೆ. ಆದರೂ ಕೂಡ ಸ್ಥಳೀಯ ಜೆಡಿಎಸ್ ನಾಯಕರು ಅತಿಯಾದ ಆತ್ಮವಿಶ್ವಾಸದಿಂದ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.
ಇನ್ನೊಂದೆಡೆ, ಬಿಜೆಪಿಯ ಜನಸಂಕಲ್ಪ ಯಾತ್ರೆ ಜಿಲ್ಲೆಯಲ್ಲಿ ಆರಂಭವಾಗಿದ್ದು ಒಂದೇ ದಿನ ಕುಣಿಗಲ್ ಹಾಗೂ ಕೊರಟಗೆರೆ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ. ಬಿಜೆಪಿಯ ಸಾಲು ಸಾಲು ಮುಖಂಡರ ದಂಡೆ ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಇಲ್ಲಿಯೂ ಕೂಡ ಬಿಜೆಪಿ ಮುಖಂಡರು, ಮುಖ್ಯಮಂತ್ರಿಗಳು ಎಲ್ಲರೂ ಕಾಂಗ್ರೆಸ್ ಪಕ್ಷವನ್ನೇ ನೇರವಾಗಿ ಗುರಿಯಾಗಿಸಿಕೊಂಡು ಪ್ರಚಾರ ನಡೆಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಕೂಡ ಅತ್ಯುತ್ಸಾಹದಿಂದ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ನಾವೀನ್ಯತಾ ಅನುಭವ ವಸ್ತು ಸಂಗ್ರಹಾಲಯ ಸ್ಥಾಪನೆ: ಸಿಎಂ ಬೊಮ್ಮಾಯಿ