ತುಮಕೂರು:ಸಾಮಾನ್ಯವಾಗಿ ಮಲೆನಾಡು ಪ್ರದೇಶದಲ್ಲಿ ಕಂಡುಬರುವ ಅಪರೂಪದ ಮಲೆನಾಡು ಗಿಡ್ಡ ತಳಿಯ ಜಾನುವಾರುಗಳನ್ನು ಬಯಲುಸೀಮೆ ಪ್ರದೇಶದಲ್ಲೂ ಪರಿಚಯಿಸಲಾಗುತ್ತಿದೆ. ಮಲೆನಾಡಿಗೆ ಸೀಮಿತವಾಗಿದ್ದ ಈ ತಳಿಯ ಹಸು ಸಾಕಣೆ ಬಯಲುಸೀಮೆ ರೈತರಲ್ಲಿ ಮಹತ್ವ ಪಡೆದುಕೊಳ್ಳುತ್ತಿದೆ. ಮಲೆನಾಡು ಗಿಡ್ಡವನ್ನು ಉಳಿಸಿ ಬೆಳೆಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ಸಾಕುವ ಹಳ್ಳಿಕಾರ್ ತಳಿ ಜಾನುವಾರುಗಳಿಗೆ ಅಪಾರ ಬೇಡಿಕೆ ಇದೆ. ಇಂತಹ ತಳಿಯ ಹಸುಗಳನ್ನು ಕೆಲ ಜಾನುವಾರು ಜಾತ್ರೆಗಳಲ್ಲಿ ಉತ್ತರ ಕರ್ನಾಟಕ ಭಾಗದ ರೈತರು ಖರೀದಿಸಿ ತೆಗೆದುಕೊಂಡು ಹೋಗುತ್ತಾರೆ. ಈಗ ತುಮಕೂರು ಜಿಲ್ಲೆಯ ರೈತರು ಮಲೆನಾಡಿನ ಗಿಡ್ಡ ತಳಿಯತ್ತ ಆಕರ್ಷಿತರಾಗಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ರೈತರು ಈ ತಳಿಯ ಹಸುಗಳನ್ನೂ ಸಹ ಸಾಕುವುದಕ್ಕೆ ಒಲವು ತೋರುತ್ತಿದ್ದಾರೆ. ಮಲೆನಾಡು ಗಿಡ್ಡ ತಳಿಯ ಹಾಲಿನ ಮಹತ್ವ ಹಾಗೂ ಅದರಿಂದ ಉತ್ಪತ್ತಿಯಾಗುವ ಸಗಣಿ ಹಾಗೂ ಗಂಜಲ ಬಳಸಿ ಕೃಷಿ ಚಟುವಟಿಕೆಗಳಿಗೆ ಉತ್ತಮ ಗೊಬ್ಬರವಾಗಿ ಬಳಸಬಹುದು ಎಂದು ರೈತರಲ್ಲಿ ಅರಿವು ಮೂಡಿಸಲಾಗುತ್ತಿದೆ.
ಬಯಲುಸೀಮೆ ಭಾಗದಲ್ಲಿ ಈ ಜಾನುವಾರುಗಳನ್ನು ಸಾಕಲು ಯಾವುದೇ ತೊಂದರೆ ಇಲ್ಲ. ಕನಿಷ್ಠ ನಾಲ್ಕರಿಂದ ಐದು ತಿಂಗಳ ಕಾಲ ಬಹಳ ಜೋಪಾನದಿಂದ ಕಾಪಾಡಬೇಕಷ್ಟೇ. ಆ ನಂತರ ಇಲ್ಲಿನ ವಾತಾವರಣಕ್ಕೆ ಈ ಜಾನುವಾರು ತಳಿ ಹೊಂದಿಕೊಳ್ಳುತ್ತವೆ ಎನ್ನುತ್ತಾರೆ ರೈತರು.