ತುಮಕೂರು :ಒಂದೆಡೆ ತುಮಕೂರು ನಗರಕ್ಕೆ ಹೊಂದಿಕೊಂಡಂತೆ ಇರುವ ಬೆಂಗಳೂರಿನಲ್ಲಿ ಇಬ್ಬರಿಗೆ ರೂಪಾಂತರಿ ಒಮ್ರಿಕಾನ್ ವೈರಸ್ ತಗುಲಿದೆ. ಸುದ್ದಿ ತಿಳಿಯುತ್ತಿದ್ದಂತೆ ತುಮಕೂರು ನಗರದಲ್ಲಿ ಜಿಲ್ಲಾಡಳಿತ ಅಲರ್ಟ್ ಆಗಿದೆ. ಖುದ್ದು ರಸ್ತೆಗಿಳಿದಿರುವ ಜಿಲ್ಲಾಧಿಕಾರಿ ಪಾಟೀಲ್ ಅವರು ವ್ಯಾಕ್ಸಿನ್ ನೀಡುವಿಕೆಯ ಕಾರ್ಯಕ್ಕೆ ಭರದಿಂದ ಚಾಲನೆ ನೀಡಿದ್ದಾರೆ.
ಎರಡನೇ ಡೋಸ್ ಹಾಕಿಕೊಳ್ಳದ ಜನರಿಗೆ ಡಿಸಿ ಮನವರಿಕೆ ಮೊದಲ ವ್ಯಾಕ್ಸಿನ್ ತೆಗೆದುಕೊಂಡು ಎರಡನೇ ವ್ಯಾಕ್ಸಿನ್ ತೆಗೆದುಕೊಳ್ಳದೆ ಇರುವವರನ್ನು ಪತ್ತೆ ಹಚ್ಚಿರುವ ಜಿಲ್ಲಾ ಆರೋಗ್ಯ ಇಲಾಖೆ ಅವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದೆ.
ಹೀಗಾಗಿ, ಜಿಲ್ಲಾಧಿಕಾರಿ ಅಂತಹ ಜನವಸತಿ ಪ್ರದೇಶಗಳ ಕಡೆ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಹಾಗೂ ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ಸಿಬ್ಬಂದಿ ಜತೆಗೆ ತೆರಳಿ ಲಸಿಕೆ ಪಡೆದುಕೊಳ್ಳುವಂತೆ ಅವರ ಮನವೊಲಿಸುವಲ್ಲಿ ತೊಡಗಿದ್ದರು.
ಮುಂಜಾಗ್ರತಾ ಕ್ರಮವಾಗಿ ಎರಡನೇ ವ್ಯಾಕ್ಸಿಂಗ್ ಅನ್ನು ಕಡ್ಡಾಯವಾಗಿ ಪಡೆಯುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ವ್ಯಾಕ್ಸಿನ್ ಪಡೆಯದ ಸಾರ್ವಜನಿಕರನ್ನು ಪತ್ತೆಹಚ್ಚಿ ಅವರುಗಳಿಗೆ ಮನವೊಲಿಸುವಂತೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೀಗಾಗಿ, ತಾಲೂಕು ಮಟ್ಟದ ಅಧಿಕಾರಿಗಳು ಇದೀಗ ಬೀದಿ ಬೀದಿ ಸುತ್ತುತ್ತಿದ್ದಾರೆ.