ತುಮಕೂರು :ಮಳೆಗಾಲ ಬಂದರೆ ಬಹುತೇಕ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ರಸ್ತೆಗಳು ಹದಗೆಟ್ಟು ಹೋಗುತ್ತವೆ. ಅವುಗಳ ನಿರ್ವಹಣೆ ಮಾಡುವುದೇ ಪಾಲಿಕೆಗೆ ತಲೆನೋವಾಗಿದೆ.
ಈ ಕಾರಣಗಳಿಂದಾಗಿ ಮಳೆಗಾಲದ ನಂತರದ ರಸ್ತೆಯಲ್ಲಿನ ಗುಂಡಿ ಮುಚ್ಚಲು ಪಾಲಿಕೆ ವತಿಯಿಂದ ಪ್ರತ್ಯೇಕ ಅನುದಾನ ಕೂಡ ಮೀಸಲಿರಿಸಲಾಗಿದೆ. ಒಮ್ಮೆ ರಸ್ತೆ ಕಾಮಗಾರಿ ಪೂರ್ಣಗೊಂಡ್ರೆ, ಒಂದು ವರ್ಷಗಳ ಕಾಲ ಸಂಬಂಧಪಟ್ಟ ಗುತ್ತಿಗೆದಾರರು ನಿರ್ವಹಣೆ ಮಾಡಲಿದ್ದಾರೆ. ಆದರೆ, ಒಂದು ವರ್ಷದ ನಂತರ ರಸ್ತೆಗಳ ನಿರ್ವಹಣೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುತ್ತದೆ.
ರಸ್ತೆಗುಂಡಿ ಮುಚ್ಚಲು ಸಿದ್ಧತೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಅನುದಾನಗಳಲ್ಲಿ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸರ್ಕಾರದ ನಿಯಮಾವಳಿ ಪ್ರಕಾರ ಈ ಟೆಂಡರ್ ಮೂಲಕ ಗುತ್ತಿಗೆದಾರರನ್ನು ಆಹ್ವಾನಿಸಿ, ಗುತ್ತಿಗೆ ನೀಡಲಾಗುತ್ತದೆ. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ ನಂತರ ಮುಂಜಾಗ್ರತಾ ಕ್ರಮವಾಗಿ ಸೆಕ್ಯುರಿಟಿ ಡೆಪಾಸಿಟ್ ಹಣವನ್ನ ಪಾಲಿಕೆಯಲ್ಲಿಯೇ ಉಳಿಸಿಕೊಳ್ಳಲಾಗುತ್ತದೆ.
ಅಕಸ್ಮಾತ್ ಒಂದು ವರ್ಷದೊಳಗೆ ರಸ್ತೆ ಹದಗೆಟ್ಟು ಹೋದ್ರೆ, ತಕ್ಷಣದ ವ್ಯವಸ್ಥೆಯಂತೆ ಪಾಲಿಕೆಯೇ ಕೆಲವೊಮ್ಮೆ ಕಾಮಗಾರಿಯನ್ನು ಪೂರ್ಣಗೊಳಿಸುತ್ತದೆ. ರಸ್ತೆ ಯಾವುದೇ ರೀತಿಯ ಡ್ಯಾಮೇಜ್ ಆಗದಿದ್ದರೆ, ಸೆಕ್ಯೂರಿಟಿ ಹಣವನ್ನು ಗುತ್ತಿಗೆದಾರರಿಗೆ ವಾಪಸ್ ನೀಡಲಾಗುತ್ತದೆ. ಮಳೆಗಾಲದ ನಂತರ ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಗುಂಡಿಯನ್ನು ಪಾಲಿಕೆ ಟೆಂಡರ್ ಕರೆದು ಗುತ್ತಿಗೆ ನೀಡುತ್ತದೆ.