ತುಮಕೂರು:ಮಂತ್ರ-ಘೋಷಗಳು ಮೊಳಗ್ತಿವೆ. ಹೋಮ-ಹವನದಿಂದಲಾದ್ರೂ ಜಗತ್ತಿಗೆ ಅಂಟಿದ ವೈರಸ್ ಹಾವಳಿ ಒಂಚೂರು ಕಡಿಮೆಯಾಗಲಿ. ಜನರು ಸೋಂಕಿನಿಂದ ಮುಕ್ತಿ ಹೊಂದಲಿ ಅನ್ನೋ ಕಾರಣಕ್ಕೆ ಇಲ್ಲಿ ಹೋಮ-ಹವನದ ಮೊರೆ ಹೋಗಲಾಗಿದೆ.
ಕೊರೊನಾ ನಿವಾರಣೆಗೆ ಕುಂದೂರು ಗ್ರಾಮದಲ್ಲಿ ವಿಶೇಷ ಹೋಮ ಮಾಡಿದ ಗ್ರಾಮಸ್ಥರು ತುಮಕೂರು ನಗರದ ಹೊರವಲಯದ ಕುಂದೂರು ಗ್ರಾಮದಲ್ಲಿ ಕಳೆದ ಎರಡ್ಮೂರು ತಿಂಗಳಿನಿಂದ ಕೋವಿಡ್ಗೆ 7 ಮಂದಿ ಮಧ್ಯ ವಯಸ್ಸಿನವರು ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಇನ್ನೂ 8 ಮಂದಿ ಇದಕ್ಕಿದ್ದಂತೆ ಮೃತಪಟ್ಟಿದ್ದಾರೆ. ಇದರಿಂದ ಆತಂಕಗೊಂಡ ಊರ ಜನ ಕೊರೊನಾ ನಿವಾರಣೆಗೆ ದೇವರ ಮೊರೆ ಹೋಗಿದ್ದಾರೆ.
ಮಲ್ಲೇಶ್ವರ ದೇಗುಲದಲ್ಲಿ ಮೃತ್ಯುಂಜಯ ಹೋಮ, ನವಗ್ರಹ ಹೋಮ, ಅಭಿಷೇಕ ನಡೆಸಿ ಕೊರೊನಾ ಸೋಂಕು ನಿವಾರಣೆಗೆ ಜನರೆಲ್ಲ ಪ್ರಾರ್ಥಿಸಿದರು. ಏಳು ಮಂದಿ ಪುರೋಹಿತರು, ಎರಡು ಜೋಡಿ ದಂಪತಿ ಪಾಲ್ಗೊಂಡಿದ್ದರು.
ಓದಿ: ಮೇಕೆದಾಟು ಯೋಜನೆ ಜಾರಿ ಸಂಬಂಧ ಕೇಂದ್ರ ನಮಗೆ ನ್ಯಾಯ ಒದಗಿಸುತ್ತದೆ: ಬೊಮ್ಮಾಯಿ
ದೇಗುಲದಲ್ಲಿ ಪ್ರತಿ ಅಮಾವಸ್ಯೆ ವಿಶೇಷ ಪೂಜೆ ಇರುತ್ತೆ. ಆದರೆ, ಕೊರೊನಾ ಹಿನ್ನೆಲೆ 2 ತಿಂಗಳಿನಿಂದ ಪೂಜೆ ಸ್ಥಗಿತವಾಗಿತ್ತು. ಇದರಿಂದಲೇ ಊರಿಗೆ ಕೇಡಾಗಿದೆ ಅಂತ ಜನ ಈಗ ದೇವರ ಮೊರೆ ಹೋಗಿದ್ದಾರೆ. ವೈಜ್ಞಾನಿಕವಾಗಿ ಇದು ಮೌಢ್ಯದಂತೆ ಕಂಡ್ರೂ ಜನರ ನಂಬಿಕೆಯೇ ನಿಜವಾಗಲಿ. ಜಗಕ್ಕಂಟಿದ ಈ ಜಾಡ್ಯ ತೊಲಗಲಿ.