ತುಮಕೂರು: ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಉಳಿಯುವ ಕೊಳೆತ ಹೂವು, ಹಣ್ಣು, ತರಕಾರಿಗಳನ್ನು ರಸ್ತೆಬದಿಯಲ್ಲಿ ಸುರಿಯುತ್ತಿರುವುದರಿಂದ ಸಾರ್ವಜನಿಕರಿಗೆ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ತೊಂದರೆಯಾಗುತ್ತಿದೆ.
ಮಾರ್ಕೆಟ್ ಸುತ್ತ ಇರುವ ಕಸದ ರಾಶಿ ಹೌದು, ಅಂತರಸನಹಳ್ಳಿ ಬಳಿಯಿರುವ ಮಾರುಕಟ್ಟೆಯಲ್ಲಿನ ಘನತಾಜ್ಯವನ್ನು ವಿಲೇವಾರಿ ಮಾಡುವಲ್ಲಿ ಮಹಾನಗರಪಾಲಿಕೆ ಹಾಗೂ ಎಪಿಎಂಸಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ರಸ್ತೆಬದಿಯಲ್ಲಿ ಕೊಳೆತ ಹೂ, ಹಣ್ಣು-ತರಕಾರಿಗಳನ್ನು ಎಸೆಯಲಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಹಾಗೂ ರಸ್ತೆ ಬದಿ ವ್ಯಾಪಾರಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ಎರಡನೇ ವಾರ್ಡ್ಗೆ ಸೇರುವ ಈ ಮಾರುಕಟ್ಟೆಯು ಆರಂಭದಿಂದಲೂ ಒಂದಿಲ್ಲೊಂದು ಸಮಸ್ಯೆಗೆ ಒಳಗಾಗುತ್ತಲೇ ಇದೆ. ನಗರ ಪ್ರದೇಶದಿಂದ ಹೊರಗಿರುವ ಕಾರಣ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಲೆಹಾಕದೆ ಸುಮ್ಮನಾಗಿದ್ದಾರೆ.
ಸರ್ಕಾರ ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲು ಅನೇಕ ಕಾರ್ಯಕ್ರಮ, ಜಾಥಾಗಳನ್ನು ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡುತ್ತದೆ. ಆದರೆ ಯಾವುದೂ ಸಹ ಸರಿಯಾಗಿ ಜಾರಿಯಾಗದಿರುವುದು ನಿಜಕ್ಕೂ ವಿಪರ್ಯಾಸ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾರಂಭವಾಗಿ 7 ವರ್ಷಗಳೇ ಕಳೆದಿವೆ. ಆದ್ರೆ ಪ್ರಾರಂಭದಿಂದಲೂ ಇದೇ ಸಮಸ್ಯೆ ಇದೆ. ತಿಂಗಳಿಗೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಕಸ ವಿಲೇವಾರಿ ಮಾಡಲಾಗುತ್ತದೆಯಂತೆ. ಹೀಗಾಗಿ ವಾಹನ ಸವಾರರು, ಗ್ರಾಹಕರು ಮತ್ತು ವ್ಯಾಪಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಮಾರುಕಟ್ಟೆಯ ಕಸವನ್ನು ರಸ್ತೆ ಬದಿ ಹಾಕುವುದರಿಂದ ವ್ಯಾಪಾರ ಮಾಡಲು ಸಮಸ್ಯೆಯಾಗುತ್ತಿದೆ. ಅಲ್ಲದೆ ಸಾರ್ವಜನಿಕರು ಇಲ್ಲಿಯೇ ಮೂತ್ರ ವಿಸರ್ಜನೆ ಮಾಡುವುದರಿಂದ ಗಬ್ಬು ವಾಸನೆ ಬರುತ್ತದೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಾಸನೆಯಿಂದ ನಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ವ್ಯಾಪಾರಿ ನಾಗಭೂಷಣ್ ಅಳಲು ತೋಡಿಕೊಂಡಿದ್ದಾರೆ.
ಇನ್ನಾದರೂ ಮಹಾನಗರ ಪಾಲಿಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಾಲಕಾಲಕ್ಕೆ ಘನತಾಜ್ಯ ವಿಲೇವಾರಿ ಮಾಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.