ತುಮಕೂರು: ಪೊಲೀಸ್ ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಲ್ಲದೇ ಮಾಹಿಳಾ ಪಿಎಸ್ಐ ಜೊತೆ ಅಸಭ್ಯವಾಗಿ ವರ್ತಿಸಿದ ಗಂಭೀರ ಆರೋಪದ ಮೇರೆಗೆ ತುಮಕೂರು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಶಶಿ ಹುಲಿಕುಂಟೆ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ನಗರದ ತಿಲಕ್ ಪಾರ್ಕ್ ಠಾಣೆಗೆ ನುಗ್ಗಿದ ಆರೋಪಿ, ಸಿಬ್ಬಂದಿಯೊಂದಿಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಷ್ಟೇ ಅಲ್ಲದೇ, ಪೆ ಎಂಎಲ್ಎ ಪೋಸ್ಟರ್ ಅಂಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿಂತೆ ವಶಕ್ಕೆ ಪಡೆದಿದ್ದ ನಾಲ್ವರು ಆರೋಪಿಗಳನ್ನು ಪೊಲೀಸ್ ಠಾಣೆಯಿಂದ ಓಡಿ ಹೋಗುವಂತೆ ಪ್ರೇರೇಪಿಸಿದ್ದರಂತೆ. ಮತ್ತು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳನ್ನು ಬಿಡುಗಡೆ ಮಾಡಲು ಪಿಎಸ್ಐ ಒಪ್ಪದಿದ್ದಾಗ ದರ್ಪದಿಂದ ಮಾತನಾಡಿದ ಶಶಿ, ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಮೂರು ತಿಂಗಳ ನಂತರ ನಮ್ಮ ಸರ್ಕಾರ ಬರುತ್ತದೆ. ಆಗ ನಿಮ್ಮನ್ನೆಲ್ಲಾ ನೋಡಿಕೊಳ್ಳುತ್ತೇನೆ ಎಂದು ಪಿಎಸ್ಐ ಹಾಗೂ ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಆವಾಜ್ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್‌ನ 40% ಕಮಿಷನ್, ಪೇ ಸಿಎಂ ಅಸ್ತ್ರಕ್ಕೆ ಬಿಜೆಪಿಯಿಂದ ರಿ-ಡೂ, ಎಸಿಬಿ ಪ್ರತ್ಯಾಸ್ತ್ರ
"ಪೇ ಎಂಎಲ್ಎ ಪೋಸ್ಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದ ನಾಲ್ವರನ್ನು ಶಶಿ ಹುಲಿಕುಂಟೆ ಸಿನಿಮೀಯ ರೀತಿಯಲ್ಲಿ ಠಾಣೆಯಿಂದ ಎಸ್ಕೇಪ್ ಮಾಡಿಸಿದ್ದರು. ನಂತರ ಪೊಲೀಸರು ಶಶಿಯನ್ನು ಬಂಧಿಸಿ, ತುಮಕೂರು 3ನೇ ಹೆಚ್ಚುವರಿ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅಲ್ಲದೇ, ಠಾಣೆಯಿಂದ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಸಹ ವಶಕ್ಕೆ ಪಡೆಯಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಸರ್ಕಾರ ಜನರಿಗೆ ಮಕ್ಮಲ್ ಟೋಪಿ ಹಾಕಿದೆ.. ಪ್ರಜಾಧ್ವನಿ ಮೂಲಕ ಕಾಂಗ್ರೆಸ್ ನಾಯಕರ ವಾಗ್ದಾಳಿ
ಏನಿದು ಪೇ ಎಂಎಲ್ಎ ಪೋಸ್ಟರ್?:ಫೆಬ್ರವರಿ 25 ರಂದು ತುಮಕೂರಿನ ಗಾಂಧಿನಗರದ ಬಳಿ ನಾಲ್ವರು ಪೇ ಎಂಎಲ್ಎ ಎಂಬ ಪೋಸ್ಟರ್ಗಳನ್ನು ಅಂಟಿಸುತ್ತಿದ್ದರು. ಈ ಕುರಿತು ಮಾಹಿತಿ ಪಡೆದ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಪೋಸ್ಟರ್ ಅಂಟಿಸುತ್ತಿದ್ದ ನಾಲ್ವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದರು. ನಾಲ್ವರನ್ನು ವಶಕ್ಕೆ ಪಡೆದ ಬಳಿಕ ಶಶಿ ಹುಲಿಕುಂಟೆ ಠಾಣೆಗೆ ಬಂದು ಗಲಾಟೆ ಮಾಡಿದ್ದಾರೆ. ರಾತ್ರಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ಪಿಎಸ್ಐ ರತ್ನಮ್ಮ ಕರೆ ಮಾಡಿ, ಬೆಳಗ್ಗೆ ಬಂದು ವಿಚಾರಣೆ ಮಾಡುವುದಾಗಿ ಹೇಳಿದ್ದಾರೆ. ಫೋನ್ನಲ್ಲಿ ಪಿಎಸ್ಐ ಅವರಿಗೆ ಅವಾಜ್ ಹಾಕಿದ ಶಶಿ, ನಮ್ಮ ಹುಡುಗರನ್ನು ಕೂಡಲೇ ಬಿಡಿ ಎಂದು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:ಭ್ರಷ್ಟಾಚಾರದ ತತ್ತಿ ಇಟ್ಟು ಕಾವು ಕೊಟ್ಟವರು ಕಾಂಗ್ರೆಸ್ಸಿನವರೇ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ