ತುಮಕೂರು:ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ದೃಷ್ಟಿಯಿಂದ ಇಲ್ಲಿನ ಮಹಾನಗರ ಪಾಲಿಕೆ ಹೆಚ್ಚಾಗಿ ಸ್ವಚ್ಛತಾ ಕಾರ್ಯಕ್ರಮಗಳತ್ತಲೂ ಗಮನ ಹರಿಸಿದೆ. ಅದರಲ್ಲೂ ಮುಖ್ಯವಾಗಿ ಒಳಚರಂಡಿ ವ್ಯವಸ್ಥೆಯಲ್ಲಿನ ಲೋಪವನ್ನು ಸರಿಪಡಿಸುವುದೇ ಪಾಲಿಕೆಗೆ ದೊಡ್ಡ ಸವಾಲಿನ ಕೆಲಸವಾಗಿತ್ತು.
ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಕೊಳಚೆ ನೀರು ನಿರ್ವಹಣಾ ಘಟಕಗಳಿವೆ. ಈ ಘಟಕಗಳ ಬಳಿ ನಿರಂತರವಾಗಿ ಸ್ಯಾನಿಟೈಸೇಷನ್ ಮಾಡುತ್ತಲೇ ಬರಲಾಗಿದೆ. ಇದಲ್ಲದೇ ಕೊರೊನಾ ಸಂಕಷ್ಟದ ನಡುವೆ ಪಾಲಿಕೆಯು ಒಳಚರಂಡಿ ವ್ಯವಸ್ಥೆಯಲ್ಲಿನ ಪಿಟ್ಗಳಲ್ಲಿನ ಕೊಳಚೆ ಸೋರಿಕೆ ತಡೆಗಟ್ಟಲು ಹರಸಾಹಸಪಟ್ಟಿದೆ. ಮಳೆಗಾಲ ಆರಂಭವಾದ ತಕ್ಷಣ ಕೊಳಚೆ ನೀರು ನಿರ್ವಹಣೆ ಸಮಸ್ಯೆ ಉದ್ಭವಿಸುವುದು ಸಾಮಾನ್ಯ. ಅಲ್ಲದೇ, ಈ ಬಾರಿ ಸಾಕಷ್ಟು ಮಳೆ ಸಹ ಆಗಿದೆ. ಕೊಳಚೆ ನೀರು ಹರಿಯುವ ಪಿಟ್ಗಳ ಸಮೀಪ ತೊಂದರೆಯಾದ ತಕ್ಷಣ ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅದನ್ನು ಸರಿಪಡಿಸುವ ಕೆಲಸ ಮಾಡಿದ್ದಾರೆ.
ಪಾಲಿಕೆಯಲ್ಲಿ ಪ್ರತ್ಯೇಕವಾದ ಸಿಬ್ಬಂದಿ ಇದ್ದು ಸಮಸ್ಯೆಯಾದ ತಕ್ಷಣ ಅಲ್ಲಿಗೆ ತೆರಳಿ ಸಕ್ಕಿಂಗ್ ಯಂತ್ರಗಳ ಮೂಲಕ ನಿವಾರಣೆ ಮಾಡಿದ ಉದಾಹರಣೆ ಸಾಕಷ್ಟಿವೆ. ಇನ್ನು ಕೊಳಚೆ ನೀರು ಹರಿಯುವಂತಹ ಪೈಪ್ಗಳು ಒಡೆದು ಹೋದಾಗ ಅದನ್ನು ಸರಿಪಡಿಸುವ ಕಾರ್ಯ ಮಾಡಿದ್ದಾರೆ. ಈ ವೇಳೆ, ಕೊರೊನಾ ಸೋಂಕು ಹರಡದಂತೆ ನಿರಂತರವಾಗಿ ಸ್ಯಾನಿಟೈಸೇಷನ್ ಮಾಡಿದ್ದಾರೆ. ಇನ್ನು ಸೀಲ್ಡೌನ್ ಆದಂತಹ ಪ್ರದೇಶಗಳಲ್ಲಿ ಕೊಳಚೆ ನೀರಿನ ಸಮಸ್ಯೆ ಎದುರಾದಾಗ ಪಾಲಿಕೆ ಸಿಬ್ಬಂದಿಯಲ್ಲಿ ಕೆಲವರು ಅಲ್ಲಿ ಕೆಲಸ ಮಾಡಲು ಹಿಂದೇಟು ಹಾಕಿದ ಘಟನೆಯೂ ನಡೆದಿತ್ತು. ಆದರೆ, ತಕ್ಷಣ ಬೇರೆ ಸಿಬ್ಬಂದಿನ್ನು ಕರೆಸಿ ಸಮಸ್ಯೆ ನಿವಾರಿಸುವ ಕೆಲಸ ಮಾಡಲಾಗಿದೆ ಎನ್ನುತ್ತಾರೆ ಪಾಲಿಕೆ ಮೇಯರ್ ಫರೀದಾ ಬೇಗಂ.
ಇನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾಕ್ಟರ್ ನಾಗೇಂದ್ರಪ್ಪ ಅವರ ಪ್ರಕಾರ ಕೊಳಚೆ ನೀರು ಘಟಕಗಳ ಮೂಲಕ ಕೊರೊನಾ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಈ ಸೋಂಕಿನ ಸಾಮಾನ್ಯ ಹರಡುವಿಕೆಗೂ ಮತ್ತು ಕೊಳಚೆ ನೀರಿನ ಮೂಲಕ ಹರಡುವ ಅನೇಕ ರೀತಿಯ ಸೋಂಕುಗಳಿಗೂ ಸಾಕಷ್ಟು ವ್ಯತ್ಯಾಸವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.