ತುಮಕೂರು:ಈ ಜಿಲ್ಲೆಯ ಜನರು ಪ್ರಬುದ್ಧರು. ಬೇರೆ ಜಿಲ್ಲೆಯವರು ಇಲ್ಲಿ ಬಂದು ಆಡಳಿತ ನಡೆಸಲು ಸಹಿಸುವುದಿಲ್ಲ. ಜೊತೆಗೆ ನೀರಿನ ವಿಷಯದಲ್ಲಿ ನಮ್ಮ ಜಿಲ್ಲೆಗೆ ಅನ್ಯಾಯವಾಗಿರುವುದರಿಂದ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರಿಗೆ ಸೋಲುಂಟಾಗಿದೆ ಎಂದು ಚಿಕ್ಕನಾಯಕನಹಳ್ಳಿಯ ಬಿಜೆಪಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮಾಧುಸ್ವಾಮಿ, ಮತದಾರರು ಮೋದಿ ಹಾಗೂ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಮೇಲೆ ನಂಬಿಕೆ ಇಟ್ಟು ಮತದಾನ ಮಾಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಜಿಲ್ಲೆಯ ಜನರು ಪ್ರಬುದ್ಧರು ಎಂದು ಸಾಬೀತಾಗಿದೆ. ಬೇರೆ ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ಬಂದು ಆಳ್ವಿಕೆ ಮಾಡುವುದನ್ನು ಸಹಿಸಲಾಗದೆ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಗೆಲ್ಲಿಸಿದ್ದಾರೆ.
ತುಮಕೂರಿಗರು ಬೇರೆ ಜಿಲ್ಲೆಯವರಿಗೆ ಅಧಿಕಾರ ಕೊಡಲು ಬಯಸುವುದಿಲ್ಲ : ಮಾಧುಸ್ವಾಮಿ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ತುಮಕೂರಿನಲ್ಲಿ ಸ್ಪರ್ಧಿಸಬಾರದಿತ್ತು. ಸ್ಪರ್ಧಿಸಿ ಸೋತಿರುವುದು ನನಗೂ ಸಹ ನೋವುಂಟು ಮಾಡಿದೆ. ತುಮಕೂರು ಜಿಲ್ಲೆಗೆ ನೀರು ನೀಡಲು ತಾರತಮ್ಯ ಮಾಡಿದ ಹಿನ್ನೆಲೆಯಲ್ಲಿ ತುಮಕೂರಿನ ಮತದಾರರು ಸ್ವಾಭಿಮಾನವನ್ನು ಬಿಟ್ಟು ಕೊಡದೆ ಸೋಲಿಸಿದ್ದಾರೆ. ಅದರಲ್ಲೂ ಪ್ರತಿಯೊಬ್ಬರೂ ಸಹ ಪಕ್ಷಾತೀತವಾಗಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಈ ಚುನಾವಣೆಯಲ್ಲಿ ನಾವು ತಿಳಿದ ವಿಷಯವೇನೆಂದರೆ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದು. ಅದನ್ನು ನಾವು ಶಕ್ತಿ ಮೀರಿ ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದರು.
ಕರ್ನಾಟಕದಲ್ಲಿ ಜಾತಿ ರಾಜಕಾರಣ ನಡೆಯುವುದಿಲ್ಲ ಎಂದು ಮಂಡ್ಯದಲ್ಲಿ ಮತ್ತು ತುಮಕೂರಿನಲ್ಲಿ ಸಾಬೀತುಪಡಿಸಿದ್ದಾರೆ. ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿ ಮೋಸ ಮಾಡಿವೆ. ಇದು ಜೆಡಿಎಸ್ನ ಅಭ್ಯರ್ಥಿ ದೇವೇಗೌಡ ಅವರ ಸೋಲಿಗೆ ಕಾರಣ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲಿದೆ ಕಾದು ನೋಡಿ. ಪರದೆಯ ಮೇಲೆ ಸಿನಿಮಾ ಬರುವವರೆಗೂ ಕಾಯಬೇಕು ಎಂದರು.